ಚುನಾವಣೆ ಶಾಂತಿಯುತ, ಉ.ಕದಲ್ಲಿ ಶೇ76.52 ಮತದಾನ,ಹಳಿಯಾಳದಲ್ಲಿ ಗರಿಷ್ಠ ಮತದಾನ

ಅಂತರ ಜಿಲ್ಲೆ ಕಾರವಾರ ಜಿಲ್ಲಾ ಸುದ್ದಿ ರಾಜ್ಯ ಶಿರಸಿ

Spread the love

ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದು, ಶೇ.76.52ರಷ್ಟು ಮತದಾನ ದಾಖಲಾಗಿದೆ. ಶುಕ್ರವಾರ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ನಡೆದ ಮತದಾನ ಪ್ರಕ್ರಿಯೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಪೂರ್ಣಗೊಂಡಿತು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ಅವರು ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಪದವೀಧರ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬಿಸಿಲಿನ ತಾಪದ ನಡುವೆಯೂ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.

ಅಧಿಕಾರಿಗಳಿಂದಲೂ ಮತದಾನ

ಕಾರವಾರದ ಸೈಂಟ್ ಮೈಕಲ್ ಶಾಲೆಯ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ತಹಸೀಲ್ದಾರ್ ನಿಶ್ಚಲ್ ನರೋನ್ಹ ಅವರು ಸಾರ್ವಜನಿಕರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬೆಳಿಗ್ಗೆ 10 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ.10.82ರಷ್ಟು ಮತದಾನವಾಗಿತ್ತು. ಅಂಕೋಲ ತಹಸೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಕಚೇರಿಯ ಆವರಣದ ಹೊರಗೂ ಸರತಿ ಸಾಲು ಕಂಡುಬಂತು. ಕುಮಟಾ ತಹಸೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿಯೂ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು.

ಮಧ್ಯಾಹ್ನ 12 ಗಂಟೆಯ ವೇಳೆಗೆ ಶೇ.29.65ರಷ್ಟು ಮತದಾನವಾಗಿತ್ತು. ಈ ಸಂದರ್ಭದಲ್ಲಿ 2,485 ಪುರುಷರು ಹಾಗೂ 2,271 ಮಹಿಳೆಯರು ಸೇರಿದಂತೆ ಒಟ್ಟು 4,756 ಮಂದಿ ಮತ ಚಲಾಯಿಸಿದ್ದರು.

ಮಧ್ಯಾಹ್ನ 2 ಗಂಟೆಯ ವೇಳೆಗೆ ಮತದಾನದ ಪ್ರಮಾಣ ಶೇ.52.09ಕ್ಕೆ ಏರಿಕೆಯಾಗಿತ್ತು. ಆಗ 4,310 ಪುರುಷರು ಹಾಗೂ 4,045 ಮಹಿಳೆಯರು ಸೇರಿದಂತೆ ಒಟ್ಟು 8,355 ಮಂದಿ ಮತದಾನ ಮಾಡಿದ್ದರು.

ಹಳಿಯಾಳದಲ್ಲಿ ಗರಿಷ್ಠ ಮತದಾನ

ಜಿಲ್ಲೆಯಲ್ಲಿ ಒಟ್ಟು 16,039 ಮತದಾರರ ಪೈಕಿ 6,352 ಪುರುಷರು ಹಾಗೂ 5,921 ಮಹಿಳೆಯರು ಸೇರಿದಂತೆ ಒಟ್ಟು 12,273 ಮಂದಿ ಮತ ಚಲಾಯಿಸಿದ್ದಾರೆ.

ಹಳಿಯಾಳ ತಹಸೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಗರಿಷ್ಠ ಶೇ.87.43ರಷ್ಟು ಮತದಾನ ದಾಖಲಾಗಿದೆ. ದಾಂಡೇಲಿಯ ಅಂಬಿಕಾ ನಗರದ ಕೆ.ಎಚ್.ಇ.ಪಿ. ಪ್ರೌಢಶಾಲೆಯ ಮತಗಟ್ಟೆಯಲ್ಲಿ ಕನಿಷ್ಠ ಶೇ.63.64ರಷ್ಟು ಮತದಾನವಾಗಿದೆ ಎಂದು ತಿಳಿಸಿದರು.

ಅಗತ್ಯ ಸೌಲಭ್ಯಗಳ ವ್ಯವಸ್ಥೆ: ಡಿಸಿ ಲಕ್ಷ್ಮಿಪ್ರೀಯಾ

ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿನ ಮತದಾನ ಪ್ರಕ್ರಿಯೆಯನ್ನು ನೇರವಾಗಿ ವೀಕ್ಷಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಾಲತಾಣದ ಮೂಲಕ ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಶೇಷ ಚೇತನ ಮತದಾರರಿಗೆ ಗಾಲಿಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದರ ಜತೆಗೆ ತುರ್ತು ವೈದ್ಯಕೀಯ ನೆರವು ನೀಡಲು ಆರೋಗ್ಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ತಿಳಿಸಿದರು.

Leave a Reply

Your email address will not be published. Required fields are marked *