ವಿದೇಶ ವ್ಯಾಮೋಹ ಬೇಡ, ದೇಶದ ಏಳಿಗೆಗೆ ಯುವಶಕ್ತಿ ಬಳಕೆ ಆಗಲಿ: ಜಿಪಂ ಉಪಕಾರ್ಯದರ್ಶಿ ಜಯಲಕ್ಷ್ಮೀ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ

Spread the love

ಮಂಗಳೂರು (ಕೊಣಾಜೆ): ದೇಶದಲ್ಲೇ ಶಿಕ್ಷಣ ಮತ್ತು ಜ್ಞಾನ ಸಂಪಾದಿಸುವ ಯುವಕರು ವಿದೇಶದ ಉದ್ಯೋಗದತ್ತ ಆಕರ್ಷಿತರಾಗುವ ಬದಲು, ತಾಯ್ನಾಡಿನಲ್ಲಿಯೇ ದುಡಿದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಪ್ರತಿಭಾ ಪಲಾಯನ ಕಡಿಮೆಯಾಗಿ ಯುವಶಕ್ತಿ ದೇಶದ ಪ್ರಗತಿಗೆ ಬಳಕೆಯಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ್ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿಯ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಯುವಜನರ ರಾಷ್ಟ್ರವಾಗಿದ್ದು, ಯುವಕರು ಜ್ಞಾನ, ಕೌಶಲ್ಯ ಮತ್ತು ಪರಿಶ್ರಮದ ಮೂಲಕ ಮುನ್ನಡೆದಾಗ ವಿಕಸಿತ ಭಾರತದ ಕನಸು ನನಸಾಗಲು ಸಾಧ್ಯ. ಶಿಕ್ಷಣವು ಕೇವಲ ಉದ್ಯೋಗ ಗಳಿಸುವ ಸಾಧನವಾಗದೆ, ಜ್ಞಾನ, ಕೌಶಲ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸುಸಂಸ್ಕೃತರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ. ನಮ್ಮ ಶಿಕ್ಷಣ ಸಮಾಜಕ್ಕೆ ಮಾರಕವಾಗದೆ, ಸಮಾಜದ ಪ್ರಗತಿಗೆ ಪೂರಕವಾಗಬೇಕು ಎಂದರು.

2006 ರ ನಂತರ ಜಾರಿಗೆ ಬಂದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದರ ಜತೆಗೆ ಹಲವು ಸೌಲಭ್ಯಗಳನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕರ್ನಾಟಕದ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭೌಗೋಳಿಕ ಹಾಗೂ ಹವಾಮಾನ ವೈಪರೀತ್ಯಗಳಿವೆ. ಹೀಗಾಗಿ ಕರಾವಳಿ ಭಾಗದಲ್ಲಿ ಯೋಜನೆಯ ಕೆಲವು ಸೌಲಭ್ಯಗಳನ್ನು ಅನುಷ್ಠಾನಗೊಳಿಸುವಾಗ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಅಧ್ಯಯನ ಅಗತ್ಯ ಎಂದರು.

ಅನುಭವದಿಂದಲೂ ಜ್ಞಾನ ಸಂಪಾದನೆ ಸಾಧ್ಯ

ಉಳ್ಳಾಲ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್ ಎಂ.ಎನ್. ಮಾತನಾಡಿ, ಇದು ಕೃತಕ ಬುದ್ಧಿಮತ್ತೆಯ ಯುಗವಾದರೂ ಜೀವನಕ್ಕೆ ಅಗತ್ಯವಾದ ಎಲ್ಲವನ್ನೂ ತಂತ್ರಜ್ಞಾನದಿಂದಲೇ ಪಡೆಯಲು ಸಾಧ್ಯವಿಲ್ಲ. ಕೆಲವು ವಿಷಯಗಳನ್ನು ಅನುಭವದ ಮೂಲಕವೇ ಕಲಿಯಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಮುನ್ನಡೆಯಬೇಕು ಎಂದರು.

ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶ್ರೀಪತಿ ಕಲ್ಲೂರಾಯ ವಿಚಾರಸಂಕಿರಣದ ಕುರಿತು ದಿಕ್ಸೂಚಿ ಭಾಷಣ ಮಾಡಿದರು.

ರೈತರು ದೇಶದ ಬೆನ್ನೆಲುಬು

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಮಾತನಾಡಿ, ಗ್ರಾಮೀಣ ಜನರನ್ನು ಕೀಳಾಗಿ ಕಾಣುವ ಮನೋಭಾವ ಇನ್ನೂ ಕೆಲವು ಕಡೆಗಳಲ್ಲಿ ಕಂಡುಬರುತ್ತಿದೆ. ಆದರೆ ಹಳ್ಳಿಯ ಜನರು ಮತ್ತು ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಅನ್ನದಾತರು ಒಂದು ದಿನ ಕೆಲಸ ನಿಲ್ಲಿಸಿದರೂ ದೇಶದ ಚಟುವಟಿಕೆಗಳು ಸ್ತಬ್ಧವಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಸರ್ಕಾರದ ಸೌಲಭ್ಯಗಳು ಕೇವಲ ದಾಖಲೆಗಳಿಗೆ ಸೀಮಿತವಾಗದೆ ಅರ್ಹ ಜನಸಾಮಾನ್ಯರನ್ನು ತಲುಪಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ. ಮುನಿರಾಜು, ಪ್ರೊ. ಪರಮೇಶ್ವರ, ಪ್ರೊ. ವೇದವ ಮತ್ತು ಪ್ರೊ. ಪ್ರೀತಿ ಕೀರ್ತಿ ಡಿಸೋಜ ಇದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಈಶ್ವರ ಪಿ. ಪ್ರಾಸ್ತಾವಿಕ ಮಾತನಾಡಿದರು. ಜಯಶಂಭು ಶರ್ಮಾ ಸ್ವಾಗತಿಸಿದರು. ಫಾತಿಮಾ ತೊಯ್ಬ ವಂದಿಸಿದರು. ಅನ್ಸಿರಾ ಫಾತಿಮ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *