ಮಂಗಳೂರು: ತಾವೇ ರೂಪಿಸಿದ ವಿಮಾನಗಳು ಆಕಾಶದಲ್ಲಿ ಹಾರಾಡುವುದನ್ನು ಕಣ್ಣಾರೆ ಕಂಡ ವಿದ್ಯಾರ್ಥಿಗಳ ಸಂಭ್ರಮ, ಪ್ರೇಕ್ಷಕರಲ್ಲಿ ಮೂಡಿದ ಕುತೂಹಲ… ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆದ ಏರೋಫಿಲಿಯಾ–2026 ಏರ್ ಶೋ ತಾಂತ್ರಿಕ ಕೌಶಲ್ಯ ಮತ್ತು ಸೃಜನಶೀಲತೆಯ ವಿಶಿಷ್ಟ ಪ್ರದರ್ಶನವಾಗಿ ಗಮನ ಸೆಳೆಯಿತು. ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿ ಸಿದ್ಧಪಡಿಸಿದ ವಿವಿಧ ಮಾದರಿಯ ವಿಮಾನಗಳ ಹಾರಾಟ ಸುಮಾರು 3,000 ವಿದ್ಯಾರ್ಥಿಗಳಿಗೆ ರೋಮಾಂಚನದ ಅನುಭವ ನೀಡಿತು.
ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ ‘ಸಿನರ್ಜಿಯಾ–2026’ರ ಎರಡನೇ ದಿನವಾದ ನವೆಂಬರ್ 13ರಂದು ಕಾಲೇಜಿನ ಆವರಣದಲ್ಲಿ ಏರೋಫಿಲಿಯಾ–2026 ಏರ್ ಶೋ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಜ್ಞಾನ, ತಾಂತ್ರಿಕ ಸಾಮರ್ಥ್ಯ ಮತ್ತು ಸೃಜನಶೀಲ ಆಲೋಚನೆಗಳನ್ನು ಬಳಸಿಕೊಂಡು ವಿವಿಧ ಮಾದರಿಯ ವಿಮಾನಗಳನ್ನು ಸ್ವತಃ ವಿನ್ಯಾಸಗೊಳಿಸಿ ತಯಾರಿಸಿದ್ದರು. ಈ ವಿಮಾನಗಳು ಆಕಾಶದಲ್ಲಿ ಹಾರಾಡಿದ ರೀತಿ, ಅವುಗಳ ವಿಭಿನ್ನ ವಿನ್ಯಾಸ ಹಾಗೂ ಕಾರ್ಯನಿರ್ವಹಣೆಯ ವಿಧಾನಗಳು ಪ್ರೇಕ್ಷಕರ ಗಮನ ಸೆಳೆದವು. ವಿಮಾನಗಳ ಹಾರಾಟವನ್ನು ವೀಕ್ಷಿಸಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಏರೋಸ್ಪೇಸ್ ತಂತ್ರಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಮತ್ತು ಕುತೂಹಲ ಮೂಡಿತು.
ಟಿಐಎಫ್ ಲ್ಯಾಬ್ಸ್ ಸಂಸ್ಥೆಯ ಸಂಸ್ಥಾಪಕ ಡೇನಿಯಲ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸ್ವತಃ ವಿಮಾನಗಳನ್ನು ವಿನ್ಯಾಸಗೊಳಿಸಿ ತಯಾರಿಸಿರುವ ಪ್ರಯತ್ನವನ್ನು ಶ್ಲಾಘಿಸಿದ ಅವರು, ಅವರ ತಾಂತ್ರಿಕ ಆಸಕ್ತಿ ಮತ್ತು ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಪ್ರಾಯೋಗಿಕ ಜ್ಞಾನಕ್ಕೆ ಆದ್ಯತೆ
ಸುಮಾರು 3,000 ವಿದ್ಯಾರ್ಥಿಗಳು ಈ ಏರ್ ಶೋಗೆ ಸಾಕ್ಷಿಯಾದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ನಾವೀನ್ಯತೆ ಮತ್ತು ಸೃಜನಶೀಲ ಚಿಂತನೆಯನ್ನು ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಆಶಯವಾಗಿತ್ತು. ಅದರೊಂದಿಗೆ ಏರೋಸ್ಪೇಸ್ ಕ್ಷೇತ್ರ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ವಿಭಾಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ಪ್ರಯತ್ನವೂ ನಡೆಯಿತು.
ಪಠ್ಯಪುಸ್ತಕಗಳಲ್ಲಿ ಕಲಿತ ವೈಜ್ಞಾನಿಕ ತತ್ವಗಳನ್ನು ಕೇವಲ ಸೈದ್ಧಾಂತಿಕವಾಗಿ ಅರಿಯುವುದಕ್ಕಿಂತ ಅವುಗಳನ್ನು ಪ್ರಾಯೋಗಿಕವಾಗಿ ಅನ್ವಯಿಸುವುದರಿಂದ ಹೆಚ್ಚಿನ ಅನುಭವ ಮತ್ತು ಜ್ಞಾನ ಸಂಪಾದಿಸಲು ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳೇ ರೂಪಿಸಿದ ವಿಮಾನಗಳ ಪ್ರದರ್ಶನ ತೋರಿಸಿಕೊಟ್ಟಿತು.
ತಾಂತ್ರಿಕ ಶಿಕ್ಷಣದ ಜತೆಗೆ ಪ್ರಯೋಗಶೀಲತೆ, ಹೊಸ ಆವಿಷ್ಕಾರ ಮತ್ತು ಸ್ವತಂತ್ರ ಚಿಂತನೆಗೆ ಉತ್ತೇಜನ ನೀಡಿದ ಏರೋಫಿಲಿಯಾ–2026, ಸಿನರ್ಜಿಯಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಮೂಡಿಬಂತು.





