32 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ, ಹಿತೇಂದ್ರಗೆ ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರ ಹೊಣೆ, ಶಶಿಕುಮಾರ್ ಪಶ್ಚಿಮ ವಲಯದ ಐಜಿಪಿ, ಜೈನ್ ಗೆ ಕಲಬುರಗಿ ಹೊಣೆ, ಲಕ್ಷ್ಮಿ ಗಣೇಶ್ ಡಿಸಿಪಿ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಬೆಂಗಳೂರು: ರಾಜ್ಯದ ಪೊಲೀಸ್ ಆಡಳಿತದಲ್ಲಿ ಮಹತ್ವದ ಬದಲಾವಣೆ ಮಾಡಿರುವ ಸರ್ಕಾರ, ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಗೆ ಹೊಸ ಆಯಾಮ ನೀಡುವ ಉದ್ದೇಶದಿಂದ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆರ್. ಹಿತೇಂದ್ರ ಅವರಿಗೆ ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರ ಜವಾಬ್ದಾರಿ ವಹಿಸಲಾಗಿದ್ದು, ಹೇಮಂತ್ ಎಂ. ನಿಂಬಾಳ್ಕರ್ ಅವರಿಗೆ ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸ್ ಆಯುಕ್ತರ ಹುದ್ದೆ ನೀಡಲಾಗಿದೆ.

ಬೆಂಗಳೂರು ನಗರದ ವಿವಿಧ ವಲಯಗಳ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರ ಹುದ್ದೆಗಳಲ್ಲೂ ಬದಲಾವಣೆ ಮಾಡಲಾಗಿದೆ.

ಎಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ಸಿಐಡಿಯ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ, ಸಂವಹನ, ಸರಕು ಸಾಗಣೆ ಮತ್ತು ಆಧುನೀಕರಣ ವಿಭಾಗದ ಎಡಿಜಿಪಿಯಾಗಿದ್ದ ಎಸ್. ಮುರುಗನ್ ಅವರನ್ನು ಲೋಕಾಯುಕ್ತ ಎಡಿಜಿಪಿಯಾಗಿ ನೇಮಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಲೋಕಾಯುಕ್ತ ಎಡಿಜಿಪಿಯಾಗಿದ್ದ ಮನೀಶ್ ಖರ್ಬೀಕರ್ ಅವರಿಗೆ ಸಂವಹನ, ಸರಕು ಸಾಗಣೆ ಮತ್ತು ಆಧುನೀಕರಣ ವಿಭಾಗದ ಜವಾಬ್ದಾರಿ ನೀಡಲಾಗಿದೆ.

ಸ್ಥಳ ನಿರೀಕ್ಷೆಯಲ್ಲಿದ್ದ ಹೇಮಂತ್ ಎಂ. ನಿಂಬಾಳ್ಕರ್ ಅವರಿಗೆ ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸ್ ಆಯುಕ್ತ ಹುದ್ದೆ ನೀಡಲಾಗಿದ್ದು, ರೌಡಿ ನಿಗ್ರಹ ಪಡೆಯ ಆಯುಕ್ತರ ಹೆಚ್ಚುವರಿ ಹೊಣೆಯನ್ನೂ ವಹಿಸಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ ಎನ್. ಶಶಿಕುಮಾರ್ ಅವರನ್ನು ಪಶ್ಚಿಮ ವಲಯದ ಐಜಿಪಿಯಾಗಿ ಹಾಗೂ ಅನುಪಮ್ ಅಗರ್‌ವಾಲ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಐಜಿಪಿಯಾಗಿ ನೇಮಿಸಲಾಗಿದೆ.

ಕಲಬುರಗಿ ನಗರದ ಪೊಲೀಸ್ ಆಯುಕ್ತ ಹಾಗೂ ಡಿಐಜಿಪಿಯಾಗಿದ್ದ ಡಾ. ಶರಣಪ್ಪ ಎಸ್.ಡಿ. ಅವರನ್ನು ರೈಲ್ವೆ ವಿಭಾಗದ ಡಿಐಜಿಪಿಯಾಗಿ ವರ್ಗಾಯಿಸಲಾಗಿದೆ. ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರಿಗೆ ಕಲಬುರಗಿ ನಗರದ ಡಿಐಜಿಪಿ ಹಾಗೂ ಪೊಲೀಸ್ ಆಯುಕ್ತರ ಜವಾಬ್ದಾರಿ ನೀಡಲಾಗಿದೆ.

ಕಲಬುರಗಿ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಎಂ. ಪುಟ್ಟಮಾದಯ್ಯ ಅವರನ್ನು ಮೈಸೂರು ದಕ್ಷಿಣ ವಲಯದ ಡಿಐಜಿಪಿಯಾಗಿ, ಜಲಸಂಪನ್ಮೂಲ ಇಲಾಖೆಯ ಜಾಗೃತ ದಳದ ಡಿಐಜಿಪಿ ಡಾ. ಎಂ. ಅಶ್ವಿನಿ ಅವರನ್ನು ನೇಮಕಾತಿ ವಿಭಾಗದ ಡಿಐಜಿಪಿಯಾಗಿ ನೇಮಿಸಲಾಗಿದೆ. ರೈಲ್ವೆ ವಿಭಾಗದ ಡಿಐಜಿಪಿಯಾಗಿದ್ದ ಜೆ.ಕೆ. ರಶ್ಮಿ ಅವರನ್ನು ಜಲಸಂಪನ್ಮೂಲ ಇಲಾಖೆಯ ಜಾಗೃತ ದಳಕ್ಕೆ ವರ್ಗಾಯಿಸಲಾಗಿದೆ.

ಬೆಂಗಳೂರು ನಗರಕ್ಕೆ ಹೊಸ ಪೊಲೀಸ್ ಆಯುಕ್ತರು

ಬೆಂಗಳೂರು ನಗರದ ವಿವಿಧ ವಲಯಗಳ ಪೊಲೀಸ್ ಆಯುಕ್ತರ ಹುದ್ದೆಗಳಲ್ಲಿಯೂ ಪ್ರಮುಖ ಬದಲಾವಣೆ ಮಾಡಲಾಗಿದೆ. ಪೊಲೀಸ್ ಕಂಪ್ಯೂಟರ್ ವಿಭಾಗದ ಐಜಿಪಿಯಾಗಿದ್ದ ಲಾಭೂ ರಾಮ್ ಅವರನ್ನು ಸೆಂಟ್ರಲ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ, ಬಳ್ಳಾರಿ ವಲಯದ ಐಜಿಪಿಯಾಗಿದ್ದ ಡಾ. ಪಿ.ಎಸ್. ಹರ್ಷ ಅವರನ್ನು ಪೂರ್ವ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದೆ.

ಆಂತರಿಕ ಭದ್ರತಾ ವಿಭಾಗದ ಐಜಿಪಿ ವಿಕಾಶ್ ಕುಮಾರ್ ವಿಕಾಶ್ ಅವರಿಗೆ ಪಶ್ಚಿಮ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಜವಾಬ್ದಾರಿ ನೀಡಲಾಗಿದೆ. ಮೈಸೂರು ದಕ್ಷಿಣ ವಲಯದ ಐಜಿಪಿ ಡಾ. ಎಂ.ಬಿ. ಬೋರಲಿಂಗಯ್ಯ ಅವರನ್ನು ಉತ್ತರ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.

ಸಿ. ವಂಶಿಕೃಷ್ಣ ಅವರನ್ನು ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದ್ದು, ದಕ್ಷಿಣ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಲಾಗಿದೆ.

ಡಿಸಿಪಿ ಹುದ್ದೆಗಳಲ್ಲೂ ವರ್ಗಾವಣೆ

ಬೆಂಗಳೂರು ನಗರದ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ವಿಭಾಗಗಳಲ್ಲಿನ ಡಿಸಿಪಿ ಹುದ್ದೆಗಳಿಗೂ ಹೊಸ ನೇಮಕಾತಿ ಮಾಡಲಾಗಿದೆ.

ಬೆಂಗಳೂರು ನಗರ ಸಂಚಾರ ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ಡಾ. ಅನೂಪ್ ಎ. ಶೆಟ್ಟಿ ಅವರನ್ನು ಪೂರ್ವ ಬೆಂಗಳೂರು ನಗರದ ಸಂಚಾರ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ. ವಿಜಯಪುರದ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರನ್ನು ಸೆಂಟ್ರಲ್ ಬೆಂಗಳೂರು ನಗರದ ಸಿಟಿ ಆರ್ಮ್ಡ್ ರಿಸರ್ವ್ ಡಿಸಿಪಿಯಾಗಿ ನೇಮಿಸಲಾಗಿದೆ.

ಮೈಸೂರು ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕ ಚನ್ನಬಸವಣ್ಣ ಲಂಗೋಟಿ ಅವರಿಗೆ ಸೆಂಟ್ರಲ್ ಬೆಂಗಳೂರಿನ ಇಂದಿರಾನಗರದ ಡಿಸಿಪಿ ಹುದ್ದೆ ನೀಡಲಾಗಿದೆ. ಬೆಂಗಳೂರು ನಗರದ ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್. ಅವರನ್ನು ಉತ್ತರ ಬೆಂಗಳೂರು ನಗರದ ಯಶವಂತಪುರದ ಡಿಸಿಪಿಯಾಗಿ ನೇಮಿಸಲಾಗಿದೆ.

ಸಿಐಡಿ-2ರ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಭರಮಪ್ಪ ಜಗಲಾಸರ್ ಅವರಿಗೆ ಸೆಂಟ್ರಲ್ ಬೆಂಗಳೂರಿನ ಸಂಚಾರ ವಿಭಾಗದ ಡಿಸಿಪಿ ಹುದ್ದೆ ನೀಡಲಾಗಿದೆ. ಬೆಂಗಳೂರು ನಗರದ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ಅವರನ್ನು ಪಶ್ಚಿಮ ಬೆಂಗಳೂರು ನಗರದ ಕೆಂಗೇರಿ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ ಶ್ರೀಹರಿ ಬಾಬು ಬಿ.ಎಲ್. ಅವರಿಗೆ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಹುದ್ದೆ ಹಾಗೂ ರಂಜಿತ್ ಕುಮಾರ್ ಬಂಡಾರು ಅವರಿಗೆ ಬೆಂಗಳೂರು ನಗರದ ಆಡಳಿತ ವಿಭಾಗದ ಡಿಸಿಪಿ ಹುದ್ದೆ ನೀಡಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬಿಎಂಟಿಎಫ್‌ನ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೀತಾ ಎಂ.ಎಸ್. ಅವರನ್ನು ಪೂರ್ವ ಬೆಂಗಳೂರು ನಗರದ ಡಿಸಿಪಿಯಾಗಿ, ತುಮಕೂರಿನ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅವರನ್ನು ಪಶ್ಚಿಮ ಬೆಂಗಳೂರು ನಗರದ ಪೀಣ್ಯ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಸ್ಥಳ ನಿಯೋಜನೆ ನಿರೀಕ್ಷೆಯಲ್ಲಿದ್ದ ಲಕ್ಷ್ಮೀ ಗಣೇಶ್ ಕೆ. ಅವರನ್ನು ಸೆಂಟ್ರಲ್ ಬೆಂಗಳೂರು ನಗರದ ಗಾಂಧಿನಗರ ಡಿಸಿಪಿಯಾಗಿ ನೇಮಿಸಲಾಗಿದೆ. ಬೆಂಗಳೂರು ನಗರದ ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಅಮಟೆ ವಿಕ್ರಮ್ ಅವರನ್ನು ಉತ್ತರ ಬೆಂಗಳೂರು ನಗರದ ಡಿಸಿಪಿಯಾಗಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ. ಸ್ನೇಹಾ ಅವರನ್ನು ಪಶ್ಚಿಮ ಬೆಂಗಳೂರು ನಗರದ ಸಂಚಾರ ವಿಭಾಗದ ಡಿಸಿಪಿಯಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.