ಗಲ್ಫ್ ಮೆಡಿಕಲ್ ವಿವಿಯ 23ನೇ ಘಟಿಕೋತ್ಸವ: 606 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ದೇಶ ವಿದೇಶ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಅಜ್ಮಾನ್ (ಯುಎಇ): ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ 606 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.

ಅಜ್ಮಾನ್‌ನ ಯುವರಾಜ ಹಾಗೂ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶೇಖ್ ಅಮ್ಮರ್ ಬಿನ್ ಹಮೀದ್ ಅಲ್ ನುಐಮಿ ಅವರ ಉಪಸ್ಥಿತಿಯಲ್ಲಿ ತುಂಬೆ ಮೆಡಿಸಿಟಿಯ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.

ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಂಡಾ ವೆಂಕಟರಮಣ ಉಪಸ್ಥಿತರಿದ್ದರು.

ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ಆರೋಗ್ಯ ವಿಜ್ಞಾನ, ನರ್ಸಿಂಗ್ ಹಾಗೂ ಆರೋಗ್ಯ ನಿರ್ವಹಣೆ ಮತ್ತು ಕೃತಕ ಬುದ್ಧಿಮತ್ತೆ ವಿಭಾಗಗಳ ವಿದ್ಯಾರ್ಥಿಗಳು ಪದವಿ ಪಡೆದರು. ನೂತನ ವೈದ್ಯರು, ದಂತ ವೈದ್ಯರು, ಔಷಧ ತಜ್ಞರು, ನರ್ಸ್‌ಗಳು ಹಾಗೂ ಆರೋಗ್ಯ ಕ್ಷೇತ್ರದ ವೃತ್ತಿಪರರು ಪ್ರಮಾಣವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ತುಂಬೆ ಮೊಯ್ದೀನ್, ವಿಶ್ವವಿದ್ಯಾಲಯದ ಬೆಳವಣಿಗೆಗೆ ಸಹಕರಿಸಿದ ಯುಎಇ ಆಡಳಿತಗಾರರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದರು. ಪದವೀಧರರು ಜಗತ್ತಿನ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಿದರೂ ರೋಗಿಗಳನ್ನು ಕಾಳಜಿ ಮತ್ತು ಮಾನವೀಯತೆಯಿಂದ ಕಾಣಬೇಕು ಎಂದು ಸಲಹೆ ನೀಡಿದರು.

ಕುಲಪತಿ ಪ್ರೊ. ಮಂಡಾ ವೆಂಕಟರಮಣ ಅವರು ಪದವೀಧರರನ್ನು ಅಭಿನಂದಿಸಿ, ವೃತ್ತಿಪರ ಜೀವನದಲ್ಲಿ ನಿರಂತರ ಕಲಿಕೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು. ವಿದ್ಯಾರ್ಥಿಗಳ ಸಾಧನೆಯಲ್ಲಿ ಬೋಧಕ ಸಿಬ್ಬಂದಿಯ ಸಮರ್ಪಣೆ ಮತ್ತು ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ ಎಂದರು.

422 ಮಹಿಳಾ ಪದವೀಧರರು

ಈ ಬಾರಿ ಪದವಿ ಪಡೆದ 606 ವಿದ್ಯಾರ್ಥಿಗಳಲ್ಲಿ 422 ಮಹಿಳೆಯರು ಹಾಗೂ 184 ಪುರುಷರಿದ್ದಾರೆ. ಯುಎಇಯ ಏಳು ಎಮಿರೇಟ್‌ಗಳಿಗೆ ಸೇರಿದ 59 ಮಂದಿ ಎಮಿರಾಟಿ ವಿದ್ಯಾರ್ಥಿಗಳು ಪದವಿ ಪಡೆದಿರುವುದು ವಿಶೇಷ.

ವೈದ್ಯಕೀಯ ಕಾಲೇಜಿನಿಂದ 184, ಆರೋಗ್ಯ ವಿಜ್ಞಾನ ಕಾಲೇಜಿನಿಂದ 141, ದಂತ ವೈದ್ಯಕೀಯ ಕಾಲೇಜಿನಿಂದ 102, ಫಾರ್ಮಸಿ ಕಾಲೇಜಿನಿಂದ 86, ನರ್ಸಿಂಗ್ ಕಾಲೇಜಿನಿಂದ 51 ಹಾಗೂ ಆರೋಗ್ಯ ನಿರ್ವಹಣೆ ಮತ್ತು ಕೃತಕ ಬುದ್ಧಿಮತ್ತೆ ಕಾಲೇಜಿನಿಂದ 42 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ವೈದ್ಯಕೀಯ ವಿಭಾಗದಲ್ಲಿ 102 ಮಂದಿ ಎಂಬಿಬಿಎಸ್ ಪದವೀಧರರಾಗಿದ್ದು, 100ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ನಾತಕೋತ್ತರ ಮತ್ತು ಎಂಡಿ ಪದವಿಗಳನ್ನು ಗಳಿಸಿದ್ದಾರೆ.

ಪದವೀಧರರಲ್ಲಿ ಶೇ 36ರಷ್ಟು ಏಷ್ಯಾ, ಶೇ 22ರಷ್ಟು ಅರಬ್ ರಾಷ್ಟ್ರಗಳು, ಶೇ 17ರಷ್ಟು ಆಫ್ರಿಕಾ ಹಾಗೂ ಶೇ 13ರಷ್ಟು ಯುಎಇ ಮತ್ತು ಜಿಸಿಸಿ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ. ಉಳಿದವರು ಯುರೋಪ್, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆರಿಬಿಯನ್ ಪ್ರದೇಶಗಳ ವಿದ್ಯಾರ್ಥಿಗಳಾಗಿದ್ದಾರೆ.

ಜಾಗತಿಕ ಶ್ರೇಯಾಂಕದಲ್ಲಿ ಸಾಧನೆ

ಟೈಮ್ಸ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027ರಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯ, 2,297 ವಿಶ್ವವಿದ್ಯಾಲಯಗಳ ಪೈಕಿ ಅಂತಾರಾಷ್ಟ್ರೀಯ ದೃಷ್ಟಿಕೋನ ವಿಭಾಗದಲ್ಲಿ 99.4 ಅಂಕಗಳೊಂದಿಗೆ ಜಾಗತಿಕವಾಗಿ ಮೊದಲ ಸ್ಥಾನ ಗಳಿಸಿದೆ. ಈ ಶ್ರೇಯಾಂಕದಲ್ಲಿ ಸ್ಥಾನ ಪಡೆದ ಯುಎಇಯ ಏಕೈಕ ವಿಶೇಷ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.

ಟೈಮ್ಸ್ ಹೈಯರ್ ಎಜುಕೇಶನ್ ಪ್ರಭಾವ ಶ್ರೇಯಾಂಕ 2026ರಲ್ಲಿ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ವಿಭಾಗದಲ್ಲಿ 64ನೇ ಹಾಗೂ ಗುಣಮಟ್ಟದ ಶಿಕ್ಷಣ ವಿಭಾಗದಲ್ಲಿ 60ನೇ ಸ್ಥಾನ ಗಳಿಸಿದೆ. ಕ್ಯೂಎಸ್ ವಿಶ್ವವಿದ್ಯಾಲಯಗಳ ಅರಬ್ ಪ್ರಾದೇಶಿಕ ಶ್ರೇಯಾಂಕ 2027ರಲ್ಲಿ 125ನೇ ಸ್ಥಾನ ಪಡೆದಿದ್ದು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಅನುಪಾತದಲ್ಲಿ ಅರಬ್ ಪ್ರದೇಶದಲ್ಲಿ ಮೊದಲ ಸ್ಥಾನದಲ್ಲಿದೆ.

ವಿಶ್ವವಿದ್ಯಾಲಯದ ಫಾರ್ಮಸಿ ಕಾಲೇಜು ಕ್ಯೂಎಸ್ ವಿಷಯಾಧಾರಿತ ಶ್ರೇಯಾಂಕ 2026ರಲ್ಲಿ ಫಾರ್ಮಸಿ ಮತ್ತು ಫಾರ್ಮಕಾಲಜಿ ವಿಭಾಗದಲ್ಲಿ 351ರಿಂದ 400ರ ಶ್ರೇಣಿಯಲ್ಲಿ ಸ್ಥಾನ ಪಡೆದಿದೆ. ಟೈಮ್ಸ್ ಹೈಯರ್ ಎಜುಕೇಶನ್ ಅರಬ್ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027ರಲ್ಲಿ 88ನೇ ಸ್ಥಾನ ಗಳಿಸಿದೆ.

ಸಂಶೋಧನೆಗೂ ಆದ್ಯತೆ

ಸಂಶೋಧನಾ ಕ್ಷೇತ್ರದಲ್ಲಿಯೂ ವಿಶ್ವವಿದ್ಯಾಲಯ ಪ್ರಗತಿ ಸಾಧಿಸಿದ್ದು, 2025ರಲ್ಲಿ ಸ್ಕೋಪಸ್ ಸೂಚ್ಯಂಕದಲ್ಲಿ 492 ಸಂಶೋಧನಾ ಪ್ರಕಟಣೆಗಳನ್ನು ದಾಖಲಿಸಿದೆ. ತುಂಬೆ ಸಂಶೋಧನಾ ಸಂಸ್ಥೆಯ ನಿಖರ ವೈದ್ಯಕೀಯ ವಿಭಾಗ, ಜನಸಂಖ್ಯಾ ಆರೋಗ್ಯ ಸಂಸ್ಥೆ, ಅಂತಾರಾಷ್ಟ್ರೀಯ ಸಂಶೋಧನಾ ಅನುದಾನ ಹಾಗೂ 75ಕ್ಕೂ ಅಧಿಕ ವಿದೇಶಿ ವಿಶ್ವವಿದ್ಯಾಲಯಗಳೊಂದಿಗಿನ ಸಹಭಾಗಿತ್ವ ಸಂಶೋಧನಾ ಚಟುವಟಿಕೆಗಳಿಗೆ ನೆರವಾಗಿವೆ.

1998ರಲ್ಲಿ ಅಜ್ಮಾನ್‌ನಲ್ಲಿ ಸ್ಥಾಪನೆಯಾದ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯವು ತುಂಬೆ ಗ್ರೂಪ್‌ನ ಒಡೆತನದಲ್ಲಿದೆ. ಯುಎಇಯ ಪ್ರಮುಖ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಇದು ಶಿಕ್ಷಣ, ವೈದ್ಯಕೀಯ ತರಬೇತಿ ಮತ್ತು ಸಂಶೋಧನೆಯನ್ನು ಸಂಯೋಜಿಸಿರುವ ತುಂಬೆ ಶೈಕ್ಷಣಿಕ ಆರೋಗ್ಯ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ.

ವಿಶ್ವವಿದ್ಯಾಲಯದ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಯನ್ನು www\.gmu.ac.ae ಮೂಲಕ ಪಡೆಯಬಹುದು.

 

Leave a Reply

Your email address will not be published. Required fields are marked *