ಡಿ. 2 ರಂದು ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಯೋಗ ಮೇಳ, 45ಕ್ಕೂ ಅಧಿಕ ಕಂಪನಿಗಳ ಭಾಗಿ: ಪ್ರಾಂಶುಪಾಲ ಡಾ. ಇಂಜಗನೇರಿ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ಪದವೀಧರರು, ಎಂಜಿನಿಯರಿಂಗ್ ಪದವೀಧರರು ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಪ್ರಾಯೋಗಿಕ ತರಬೇತಿಯ ಅವಕಾಶ ಕಲ್ಪಿಸುವ ಉದ್ದೇಶದಿಂದ ಡಿಸೆಂಬರ್ 2ರಂದು ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಹಾಗೂ ಕೇಂದ್ರೀಕೃತ ನೇರ ಸಂದರ್ಶನ ಆಯೋಜಿಸಲಾಗಿದೆ ಎಂದು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ ಪ್ರಾಂಶುಪಾಲ ಡಾ. ಎಸ್.ಎಸ್. ಇಂಜಗನೇರಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚೆನ್ನೈನ ಅಪ್ರೆಂಟಿಸ್‌ಶಿಪ್ ತರಬೇತಿ ಮಂಡಳಿಯ ದಕ್ಷಿಣ ಪ್ರಾದೇಶಿಕ ವಿಭಾಗ, ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹಾಗೂ ಸಹ್ಯಾದ್ರಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ. 45ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಇದರಲ್ಲಿ ಭಾಗವಹಿಸಲಿದ್ದು, ವಿವಿಧ ಶೈಕ್ಷಣಿಕ ಹಿನ್ನೆಲೆಯ ಅಭ್ಯರ್ಥಿಗಳಿಗೆ ಉದ್ಯೋಗ ಹಾಗೂ ತರಬೇತಿ ಪಡೆಯಲು ಉತ್ತಮ ಅವಕಾಶ ದೊರೆಯಲಿದೆ ಎಂದರು.

ಭಾರತ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಪ್ರೆಂಟಿಸ್‌ಶಿಪ್ ತರಬೇತಿ ಮಂಡಳಿಯು ಹೊಸದಾಗಿ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯಮ ಕ್ಷೇತ್ರದ ಪ್ರಾಯೋಗಿಕ ಅನುಭವ ಒದಗಿಸುವ ಉದ್ದೇಶದಿಂದ ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ವೃತ್ತಿಪರ ಕೌಶಲ ಮತ್ತು ಅನುಭವ ಗಳಿಸಲು ಅವಕಾಶವಿದೆ ಎಂದು ತಿಳಿಸಿದರು.

ಉದ್ಯೋಗಾವಕಾಶ ಮತ್ತು ತರಬೇತಿ ವಿಭಾಗದ ಡೀನ್ ಪ್ರೊ. ರಶ್ಮಿ ಭಂಡಾರಿ ಅವರು ಮಾತನಾಡಿ, ಎಂಜಿನಿಯರಿಂಗ್‌ನ ಎಲ್ಲ ವಿಭಾಗಗಳ ಬಿ.ಇ., ಬಿ.ಟೆಕ್ ಪದವೀಧರರು, ಎಂಜಿನಿಯರಿಂಗ್ ಡಿಪ್ಲೊಮಾ ಅಭ್ಯರ್ಥಿಗಳು ಹಾಗೂ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ. ಸೇರಿದಂತೆ ಸಾಮಾನ್ಯ ಪದವಿ ಮತ್ತು ಡಿಪ್ಲೊಮಾ ಪೂರ್ಣಗೊಳಿಸಿದವರು ಸಂದರ್ಶನದಲ್ಲಿ ಭಾಗವಹಿಸಬಹುದು. 2022, 2023, 2024, 2025 ಮತ್ತು 2026ನೇ ಸಾಲಿನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ವಿನ್‌ಮನ್, ಬ್ಲೂಬರ್ಡ್ ಡೇಟಾ ಸೊಲ್ಯೂಷನ್ಸ್, ಇನ್ವೆಂಜರ್ ಟೆಕ್ನಾಲಜೀಸ್, ಸೆವೆಂತ್ ಸೆನ್ಸ್ ಟ್ಯಾಲೆಂಟ್ ಸೊಲ್ಯೂಷನ್ಸ್, ಐಗ್ಲೋಬಲ್ ಎಂಬೆಡೆಡ್ ಸೊಲ್ಯೂಷನ್ಸ್, ಎಕ್ಸ್‌ಟ್ರಾನ್ಸ್‌ಮ್ಯಾಟ್ರಿಕ್ಸ್, ಅಭಿಮೋ ಟೆಕ್ನಾಲಜೀಸ್, ಸ್ಪೇಸ್ ಎಕ್ಸ್, ಸಿಸ್ಟಮ್ ಕಂಟ್ರೋಲ್ಸ್ ಟೆಕ್ನಾಲಜಿ ಸೊಲ್ಯೂಷನ್ಸ್, ನಬಿಯನ್ಸ್, ಮೈಲಾನ್ ಲ್ಯಾಬೋರೇಟರೀಸ್, ಗೇಲ್ ಮಂಗಳೂರು ಪೆಟ್ರೋಕೆಮಿಕಲ್ಸ್, ಲೇಬರ್‌ನೆಟ್ ಸರ್ವಿಸ್ ಇಂಡಿಯಾ, ಹೆಗ್ಡೆ ಪ್ರಿಸಿಶನ್ ಪ್ರಾಡಕ್ಟ್ಸ್, ವೇವ್ ಮೆಕ್ಯಾನಿಕ್ಸ್, ಇಂಡೋ-ಮಿಮ್ ಹಾಗೂ ಪ್ಲಾಸ್ಟ್‌ಕಾಮ್ ಪ್ರಾಡಕ್ಟ್ಸ್ ಸೇರಿದಂತೆ ಹಲವು ಕಂಪನಿಗಳು ಭಾಗವಹಿಸಲಿವೆ ಎಂದರು.

ಡಿಸೆಂಬರ್ 2ರಂದು ಬೆಳಿಗ್ಗೆ 8.30ರಿಂದ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಸಂದರ್ಶನ ಪ್ರಕ್ರಿಯೆ ಆರಂಭವಾಗಲಿದೆ. ಅರ್ಹ ಅಭ್ಯರ್ಥಿಗಳು ಅಗತ್ಯ ಶೈಕ್ಷಣಿಕ ದಾಖಲೆಗಳೊಂದಿಗೆ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 824-2277766 ಸಂಪರ್ಕಿಸಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯತಂತ್ರ ಯೋಜನಾ ವಿಭಾಗದ ಡೀನ್ ಪ್ರೊ. ರಮೇಶ್ ಹಾಗೂ ಸಹಾಯಕ ಉದ್ಯೋಗಾವಕಾಶ ಅಧಿಕಾರಿ ಪ್ರೊ. ಶ್ರುತಿ ಪೂಂಜಾ ಇದ್ದರು.

Leave a Reply

Your email address will not be published. Required fields are marked *