ಮಂಗಳೂರು: ಕರಾವಳಿ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಸಮಿತಿ ರಚಿಸಿ, ವಾಸ್ತವಾಂಶಗಳನ್ನು ಪರಿಶೀಲಿಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಭರವಸೆ ನೀಡಿದ್ದಾರೆ ಎಂದು ಹೈಕೋರ್ಟ್ ಕರಾವಳಿ ಸಂಚಾರಿ ಪೀಠ ಸ್ಥಾಪನೆ ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ತಿಳಿಸಿದ್ದಾರೆ.
ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಕರ್ನಾಟಕ ಸರ್ಕಾರ ಈಗಾಗಲೇ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ಮೂಲಸೌಕರ್ಯ ಒದಗಿಸಲು ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದ ಅಭಿಪ್ರಾಯಗಳು, ಜಿಲ್ಲೆಗಳ ನಡುವಿನ ಚರ್ಚೆಗಳು ಹಾಗೂ ಎದುರಾಗಿರುವ ಅಡೆತಡೆಗಳ ಕುರಿತು ಹೋರಾಟ ಸಮಿತಿಯ ನಿಯೋಗ ಬೆಂಗಳೂರಿನಲ್ಲಿ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು.
ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠದ ಅಗತ್ಯತೆಯ ಬಗ್ಗೆ ಅರಿವಿದೆ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿ, ನಿಯೋಗದೊಂದಿಗೆ ಈ ಕುರಿತು ವಿವರವಾಗಿ ವಿಚಾರ ವಿನಿಮಯ ನಡೆಸಿದರು. ಸಂಚಾರ ಪೀಠ ಸ್ಥಾಪನೆಗೆ ಸಂಬಂಧಿಸಿದ ವಾಸ್ತವಾಂಶ ಹಾಗೂ ವಿವಿಧ ವಿಚಾರಗಳನ್ನು ಪರಿಶೀಲಿಸಲು ಸಮಿತಿ ರಚಿಸುವಂತೆ ನಿಯೋಗ ಮಾಡಿರುವ ಮನವಿ ಪರಿಗಣಿಸುವುದಾಗಿ ಅವರು ತಿಳಿಸಿದರು.
ಸಮಿತಿಯ ಮೂಲಕ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರ ಪೀಠ ಸ್ಥಾಪಿಸಬೇಕೆಂಬ ಬೇಡಿಕೆಗೆ ಕರಾವಳಿ ಭಾಗದ ಬಾರ್ ಅಸೋಸಿಯೇಷನ್‌ಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ವಿವಿಧ ಕಾರ್ಯಕರ್ತರು ಹಾಗೂ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಕರ್ನಾಟಕ ಸರ್ಕಾರ ಮಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಂದರ್ಭದಲ್ಲಿ ಕರಾವಳಿಯ ಸಮಗ್ರ ಅಭಿವೃದ್ಧಿಯ ಜತೆಗೆ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ವಿಚಾರವೂ ಪ್ರಮುಖವಾಗಿ ಚರ್ಚೆಯಾಗಲಿದೆ. ಸಂಚಾರಿ ಪೀಠಕ್ಕೆ ಅಗತ್ಯವಿರುವ ಎಲ್ಲ ಮೂಲಸೌಕರ್ಯ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಐವನ್ ಡಿಸೋಜ ಎಂದರು.
ಸೆಪ್ಟೆಂಬರ್‌ನಲ್ಲಿ ಈ ಕುರಿತು ಮತ್ತೊಮ್ಮೆ ಭೇಟಿ ನೀಡಿ ವಿಚಾರ ವಿನಿಮಯ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಇದು ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಗೆ ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ನಿಯೋಗದಲ್ಲಿ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಶೇಣವ, ಉಡುಪಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ರೋನಾಲ್ಡ್ ಪ್ರವೀಣ್, ಮಾಜಿ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ರಾಘವೇಂದ್ರ ರಾವ್, ಪ್ರಧಾನ ಜಿಲ್ಲಾ ಸರ್ಕಾರಿ ವಕೀಲ ಹಾಗೂ ಕರಾವಳಿ ಹೈಕೋರ್ಟ್ ಪೀಠ ಸಮಿತಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಪಿ. ನೊರೋನ್ಹಾ ಸೇರಿದಂತೆ ಪ್ರಮುಖರು ಇದ್ದರು.
What do you feel about this post?
Like
Love
Happy
Haha
Sad





