ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ದೊರೆತಿದೆ. ವಿಮಾನ ನಿಲ್ದಾಣ ವಿಸ್ತರಣೆ, ನೂತನ ಬಂದರು, ದ್ವೀಪಗಳ ಪ್ರವಾಸೋದ್ಯಮ ಅಭಿವೃದ್ಧಿ, ಶಿಕ್ಷಣ, ಮೀನುಗಾರಿಕೆ ಹಾಗೂ ಬುಡಕಟ್ಟು ಸಮುದಾಯಗಳ ಉದ್ಯೋಗಾವಕಾಶಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲೆಯ ವಿಮಾನ ನಿಲ್ದಾಣದ ರನ್‌ವೇಯನ್ನು 3,250 ಮೀಟರ್‌ಗೆ ವಿಸ್ತರಿಸಿ, ಎ-320 ಮಾದರಿಯ ವಿಮಾನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಯೋಜನಾ ಅನುದಾನವನ್ನು ₹250.05 ಕೋಟಿಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ 93 ಎಕರೆಗೂ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.
ಹೊನ್ನಾವರ ತಾಲ್ಲೂಕಿನ ಮಂಕಿಯಲ್ಲಿ ₹6,925 ಕೋಟಿ ವೆಚ್ಚದಲ್ಲಿ 15 ಎಂಟಿಪಿಎ ಸಾಮರ್ಥ್ಯದ ನೂತನ ಬಂದರು ಹಾಗೂ ಹಡಗು ನಿರ್ಮಾಣ ಕೇಂದ್ರವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ನಿರ್ಮಿಸಲು ಸಂಪುಟ ಅನುಮೋದನೆ ನೀಡಿದೆ. ಯೋಜನೆಯಿಂದ ಸುಮಾರು 44,800 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಏಳು ದ್ವೀಪಗಳ ಪ್ರವಾಸೋದ್ಯಮ ಅಭಿವೃದ್ಧಿ
ಕಾರವಾರ, ಅಂಕೋಲಾ ಹಾಗೂ ಭಟ್ಕಳ ತಾಲ್ಲೂಕು ವ್ಯಾಪ್ತಿಯ ಕುರುಮಗಡ, ದೇವಗಡ ಸೇರಿದಂತೆ ಏಳು ಪ್ರಮುಖ ದ್ವೀಪಗಳನ್ನು ₹307.71 ಕೋಟಿ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಪ್ರವಾಸಿ ಆಕರ್ಷಣೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.
ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ-2026ರ ಅಡಿಯಲ್ಲಿ ಬೀಚ್‌ಗಳು ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಪ್ರವಾಸೋದ್ಯಮ ವಲಯಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ.
ಶಿಕ್ಷಣ, ಮೀನುಗಾರಿಕೆಗೂ ಒತ್ತು
ಜಿಲ್ಲೆಯ 17 ಕರ್ನಾಟಕ ಪಬ್ಲಿಕ್ ಶಾಲೆಗಳ ಉನ್ನತೀಕರಣಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಉತ್ತರ ಕನ್ನಡದ ಕರಾವಳಿ ಪ್ರದೇಶವನ್ನು ‘ವಿಶೇಷ ಸಮುದ್ರ ವಲಯ’ವೆಂದು ಗುರುತಿಸಿ ಮತ್ಸ್ಯೋದ್ಯಮ ರಫ್ತಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ಮೀನುಗಾರಿಕೆ ರಸ್ತೆಗಳ ದುರಸ್ತಿಗೆ ₹20 ಕೋಟಿ ಅನುದಾನ ನೀಡುವುದಕ್ಕೂ ಹಾಗೂ ಸಿಆರ್‌ಝಡ್-2019 ನಕ್ಷೆಗಳ ಪರಿಷ್ಕರಣೆಗೆ ಸಂಪುಟ ಅನುಮೋದನೆ ನೀಡಿದೆ.
ಬುಡಕಟ್ಟು ಸಮುದಾಯಗಳಿಗೆ ಉದ್ಯೋಗಾವಕಾಶ
ಜಿಲ್ಲೆಯ ಸಿದ್ದಿ, ಕುಡಿಯ, ಹಲಸರು ಸೇರಿದಂತೆ ಅರಣ್ಯ ಬುಡಕಟ್ಟು ಸಮುದಾಯಗಳ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ರಕ್ಷಕ ಹಾಗೂ ಅರಣ್ಯ ವೀಕ್ಷಕ ಹುದ್ದೆಗಳ ನೇರ ನೇಮಕಾತಿಯಲ್ಲಿ ವಿಶೇಷ ಪ್ರಾತಿನಿಧ್ಯ ಕಲ್ಪಿಸಲು ನಿಯಮಗಳಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
ವಿಮಾನಯಾನ, ಬಂದರು, ಪ್ರವಾಸೋದ್ಯಮ, ಶಿಕ್ಷಣ, ಮೀನುಗಾರಿಕೆ ಹಾಗೂ ಉದ್ಯೋಗ ಕ್ಷೇತ್ರಗಳಿಗೆ ಸಂಬಂಧಿಸಿದ ಈ ನಿರ್ಧಾರಗಳು ಉತ್ತರ ಕನ್ನಡ ಜಿಲ್ಲೆಯ ಮೂಲಸೌಕರ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ವೇಗ ನೀಡುವ ನಿರೀಕ್ಷೆ ಮೂಡಿಸಿವೆ.
What do you feel about this post?
Like
Love
Happy
Haha
Sad





