ಖಾದರ್ ಆರೋಗ್ಯ ಸಚಿವರಾದ ಬಳಿಕ ವೆನ್ಲಾಕ್ ನಲ್ಲಿ ಸಾಮಾನ್ಯ ಹಾಸಿಗೆಗೂ ಪರದಾಡಬೇಕು, ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ದುರ್ಬಲ: ಶಾಸಕ ವೇದವ್ಯಾಸ್ ಕಾಮತ್

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜಕೀಯ ರಾಜ್ಯ ಶಿರಸಿ

Spread the love

ಮಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದು, ಈಗಾಗಲೇ ಘೋಷಿಸಿರುವ ಯೋಜನೆಗಳಿಗೂ ಅನುದಾನದ ಕೊರತೆ ಎದುರಾಗಿದೆ ಎಂದು ಆರ್ಥಿಕ ಇಲಾಖೆಯೇ ಮುಖ್ಯಮಂತ್ರಿಗೆ ಪತ್ರ ಬರೆದಿರುವಾಗ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ಯೋಜನೆಗಳಿಗೆ ಭಾರಿ ಮೊತ್ತದ ಅನುದಾನ ಘೋಷಿಸಿರುವುದು ಪ್ರಶ್ನಾರ್ಹ. ಯು.ಟಿ. ಖಾದರ್ ಅವರು ಸ್ಪೀಕರ್ ಆಗಿದ್ದಾಗ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆಗಳ ಕೊರತೆ ಇತ್ತು, ಆದರೆ ಅವರು ಆರೋಗ್ಯ ಸಚಿವರಾದ ಬಳಿಕ ಸಾಮಾನ್ಯ ಹಾಸಿಗೆಗಳಿಗೂ ಜನರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

‘ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳಿಗೇ ಅನುದಾನದ ಕೊರತೆ ಇದೆ. ₹2 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳ ಬಾಕಿ ವೆಚ್ಚವಿದೆ. ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗಳ ಬಾಕಿ ಬಿಲ್‌ಗಳ ಮೊತ್ತವೇ ₹36,136 ಕೋಟಿಯಷ್ಟಿದೆ. ಗುತ್ತಿಗೆದಾರರಿಗೆ ₹36 ಸಾವಿರ ಕೋಟಿ ಬಾಕಿ ಇದೆ. ಹೀಗಾಗಿ ಇನ್ನು ಮುಂದೆ ಹೊಸ ಘೋಷಣೆ ಮಾಡಬಾರದು ಎಂದು ಆರ್ಥಿಕ ಇಲಾಖೆ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದೆ’ ಎಂದು ತಿಳಿಸಿದರು.

‘ಆದರೆ ಈ ಎಲ್ಲ ಅಂಶಗಳನ್ನು ಕಡೆಗಣಿಸಿ ಪ್ರಚಾರಕ್ಕಾಗಿ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಬಜೆಟ್‌ನಲ್ಲೇ ಘೋಷಿಸಲಾಗಿದ್ದ ಮೀನುಗಾರಿಕೆಗೆ ಸಂಬಂಧಿಸಿದ ಸಮುದ್ರ ಅಂಬುಲೆನ್ಸ್, ಹೂಳೆತ್ತುವ ಯಂತ್ರ ಸೇರಿದಂತೆ ಹಲವು ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಅವು ಜಾರಿಯಾಗಿದ್ದರೆ ಸರ್ಕಾರ ದಾಖಲೆ ಸಮೇತ ಮಾಹಿತಿ ನೀಡಲಿ. ಬಜೆಟ್‌ನಲ್ಲಿ ಅನುದಾನ ಮೀಸಲಿಡದ ಯೋಜನೆಗಳನ್ನು ಹೇಗೆ ಅನುಷ್ಠಾನಗೊಳಿಸಲು ಸಾಧ್ಯ’ ಎಂದರು.

‘ರಾಜ್ಯವು ₹8.25 ಲಕ್ಷ ಕೋಟಿ ಸಾಲದ ಸುಳಿಯಲ್ಲಿದೆ. ಕಳೆದ 70 ವರ್ಷಗಳಲ್ಲಿ ವಿವಿಧ ಸರ್ಕಾರಗಳು ಮಾಡಿರುವ ಒಟ್ಟು ಸಾಲ ₹2.25 ಲಕ್ಷ ಕೋಟಿ ಆಗಿದ್ದರೆ, ಕಾಂಗ್ರೆಸ್ ಸರ್ಕಾರ ಕಳೆದ ಎಂಟೂವರೆ ವರ್ಷಗಳಲ್ಲಿ ₹ 6 ಲಕ್ಷ ಕೋಟಿ ಸಾಲ ಮಾಡಿದೆ’ ಎಂದು ಆರೋಪಿಸಿದರು.

‘ಸಾರಿಗೆ ನಿಗಮಗಳು, ನೀರಾವರಿ ನಿಗಮಗಳು, ವಿದ್ಯುತ್ ಕಂಪನಿಗಳು ಹಾಗೂ ಸರ್ಕಾರಿ ನೌಕರರ ವೇತನ ಪಾವತಿಯಲ್ಲಿಯೂ ವಿಳಂಬವಾಗುತ್ತಿದೆ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ಮಾತ್ರ ಅನುಷ್ಠಾನಗೊಳಿಸಲು ಸಾಧ್ಯ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ’ ಎಂದರು.

ರಾಜ್ಯದ ಅಭಿವೃದ್ಧಿಗೆ ಹಣದ ಕೊರತೆ ಉಂಟಾಗಲು ಸರ್ಕಾರದ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಈ ಹಿಂದೆ ಕಾಂಗ್ರೆಸ್‌ನ ಶಾಸಕರೂ ಹೇಳಿದ್ದರು. ಗ್ಯಾರಂಟಿ ಯೋಜನೆಗಳ ವೆಚ್ಚ ಸರಿದೂಗಿಸಲು ಹಲವು ವಸ್ತುಗಳ ಬೆಲೆ ಹೆಚ್ಚಿಸುವುದು ಅನಿವಾರ್ಯ ಎಂದು ಸಚಿವರೂ ಹೇಳಿದ್ದರು. ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದನ್ನು ಒಪ್ಪಿಕೊಂಡಿದ್ದಾರೆ. ಸಾರಿಗೆ ನಿಗಮಗಳು 8 ಸಾವಿರ ಕೋಟಿ ನಷ್ಟದಲ್ಲಿವೆ ಎಂದು ಸಾರಿಗೆ ಸಚಿವರೇ ತಿಳಿಸಿದ್ದಾರೆ ಎಂದೂ ಅವರು ತಿಳಿಸಿದರು.

‘ಸಚಿವ ಸಂಪುಟ ಸಭೆಗೂ ಮುನ್ನ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಚಿವ ಯು.ಟಿ. ಖಾದರ್ ಅವರು, ಒಮ್ಮೆ ಯೋಜನೆಗಳನ್ನು ಘೋಷಿಸೋಣ, ಅನುದಾನದ ಬಗ್ಗೆ ನಂತರ ನೋಡೋಣ ಎಂದು ಹೇಳಿದ್ದರು. ಇದರಿಂದಲೇ ಸಂಪುಟ ಸಭೆಯ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿತ್ತು. ಅದಕ್ಕಾಗಿಯೇ ನಾವು ಚೊಂಬು ಹಿಡಿದು ಪ್ರತಿಭಟನೆ ನಡೆಸಿದ್ದೆವು’ ಎಂದು ತಿಳಿಸಿದರು.

‘ಆರ್ಥಿಕ ಇಲಾಖೆ ಮುಖ್ಯಮಂತ್ರಿಗೆ ಬರೆದಿರುವ ಪತ್ರದಿಂದ ಸರ್ಕಾರದ ಹಣಕಾಸಿನ ಪರಿಸ್ಥಿತಿ ಏನು ಎಂಬುದು ಸ್ಪಷ್ಟವಾಗಿದೆ. ಆ ಪತ್ರ ಇಲ್ಲದಿದ್ದರೆ ಸಚಿವ ಸಂಪುಟ ಸಭೆಯ ಘೋಷಣೆಗಳನ್ನು ಪ್ರಶ್ನಿಸುವ ಅಗತ್ಯವೇ ನಮಗೆ ಬರುತ್ತಿರಲಿಲ್ಲ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಮಾಜಿ ಉಪ ಮೇಯರ್ ಭಾನುಮತಿ, ಪ್ರವೀಣ್ ನಿಡ್ಡೇಲ್ ಹಾಗೂ ಅಜಯ್ ಕುಮಾರ್ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry