ಕಾರವಾರ: ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮುನ್ಸೂಚನೆ ನೀಡಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 8 ರಂದು ಮಧ್ಯಾಹ್ನ 1 ಗಂಟೆಯಿಂದ 10 ರಂದು ಬೆಳಿಗ್ಗೆ 8.30 ರ ವರೆಗೆ ರೆಡ್ ಅಲರ್ಟ್ ಇದ್ದು, ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಜನರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತವು ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸಿದ್ಧತೆ ಈಗಾಗಲೇ ಕೈಗೊಂಡಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದ್ದು, ಸಾರ್ವಜನಿಕರು ಜಿಲ್ಲೆಯ ಹವಾಮಾನ ಪರಿಸ್ಥಿತಿಯ ಕುರಿತಂತೆ ನಿರಂತರ ವರದಿಗಳನ್ನು ಜಿಲ್ಲಾಧಿಕಾರಿ ಸಾಮಾಜಿಕ ಜಾಲತಾಣ ಹಾಗೂ ಸ್ಥಳೀಯ ಸುದ್ದಿ ಪತ್ರಿಕೆಗಳನ್ನು ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಹೋಗದಂತೆ ಸಾರ್ವಜನಿಕರು ಹಾಗೂ ಮುಖ್ಯವಾಗಿ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆವಹಿಸುವುದು. ಪ್ರವಾಸಿಗರು, ಹಾಗೂ ಸಾರ್ವಜನಿಕರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು ಎಂದರು.
ಕೃಷಿಕರು ಮಳೆ/ ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಿಂದ ದೂರ ಇರುವುದು ಸಾರ್ವಜನಿಕರು / ಮಕ್ಕಳು /ಕಾರ್ಮಿಕರು ಮಳೆ ಬೀಳುವ ಸಂದರ್ಭದಲ್ಲಿ ಹೊರಗೆ ತಿರುಗಾಡದೆ, ಸೂಕ್ತ ಕಟ್ಟಡದಲ್ಲಿ ಆಶ್ರಯ ಪಡೆಯುವುದು. ಈ ಸಂದರ್ಭದಲ್ಲಿ ಮಕ್ಕಳು/ಸಾರ್ವಜನಿಕರು ಅಪಾಯಕಾರಿ ಮರ/ವಿದ್ಯುತ್ ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರುವುದು ದುರ್ಬಲವಾದ/ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ/ಮರಗಳ ಕೆಳಗೆ ನಿಲ್ಲಬಾರದು. ಈ ಅಂಶಗಳನ್ನು ಗುಡುಗು ಸಿಡಿಲು/ ಮಳೆ ಗಾಳಿಯಂತಹ ಸಂದರ್ಭಗಳಲ್ಲಿ ಚಾಚೂ ತಪ್ಪದೇ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ತಗ್ಗು ಪ್ರದೇಶದಲ್ಲಿ ಅಥವಾ ಮಳೆಯಿಂದ ಅಪಾಯಕ್ಕೀಡಾಗುವ ಪ್ರದೇಶದಲ್ಲಿ ವಾಸವಿದ್ದಲ್ಲಿ ಅಥವಾ ಶಿಥಿಲಾವಸ್ಥೆಯಿಂದ ಜಾರುವ ಹಂತದಲ್ಲಿರುವ ಕಂಪೌoಡ್ ಅಥವಾ ಮನೆಯ ಗೋಡೆ, ಇಂತಹ ದುರ್ಬಲವಾದ ಕಟ್ಟಡದಲ್ಲಿ ವಾಸವಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು, ಅಗತ್ಯವಿದ್ದಲ್ಲಿ ಈಗಾಗಲೇ ಸಂಬoಧಿಸಿದ ತಹಶೀಲ್ದಾರರಿಂದ ಗುರುತಿಸಲ್ಪಟ್ಟ ಕಾಳಜಿ ಕೇಂದ್ರದಲ್ಲಿ ಕಡ್ಡಾಯವಾಗಿ ಆಶ್ರಯ ಪಡೆದುಕೊಳ್ಳುವುದು.
ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಾಲುಸಂಕ, ಕಿರು ಸೇತುವೆ ಇತ್ಯಾದಿಗಳನ್ನು ದಾಟುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.
ಶಿಥಿಲಾವಸ್ಥೆಯಿರುವ ಅಥವಾ ಕುಸಿತದ ಹಂತದ ಕಂಪೌಂಡ್ ಅಥವಾ ಮನೆಯ ಗೋಡೆ ಕಂಡು ಬಂದಲ್ಲಿ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ ಕಂಟ್ರೋಲ್ ರೂಂ 08382-229857, ವಾಟ್ಸ್ ಆ್ಯಪ್ 9483511015 ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad
