ತಾಯಿಯ ನೆನಪು ಚಿರಸ್ಥಾಯಿಗೊಳಿಸಿದ ಪುತ್ರರು, ಬಡ ಕುಟುಂಬಕ್ಕೆ 10 ಲಕ್ಷ ವೆಚ್ಚದ ಮನೆ ನಿರ್ಮಾಣ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ
<

Spread the love

ಮಂಗಳೂರು: ತಾಯಿಯ ಸ್ಮರಣೆಯನ್ನು ಅರ್ಥಪೂರ್ಣ ಸಾಮಾಜಿಕ ಸೇವೆಯ ಮೂಲಕ ಆಚರಿಸುವ ಅಪರೂಪದ ಉದಾಹರಣೆಗೆ ಮೂಡುಶೆಡ್ಡೆ ಸಾಕ್ಷಿಯಾಯಿತು. ದಿವಂಗತ ದೇವಕಿ ಸಂಜೀವ ಶೆಟ್ಟಿ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಅವರ ಪುತ್ರರು ಕೊರಗ ಸಮುದಾಯದ ಬಡ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದರು.

<

ಮೂಡುಶೆಡ್ಡೆ ಹೊಸಲಕ್ಕೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಮನೆಯ ಕೀಲಿಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಉಮೇಶ್ ಶೆಟ್ಟಿ ಹೊಸಲಕ್ಕೆ, ತಮ್ಮ ತಾಯಿ ದೇವಕಿ ಶೆಟ್ಟಿಯವರು ಸದಾ ನೊಂದವರ ನೆರವಿಗೆ ಧಾವಿಸುತ್ತಿದ್ದ ವ್ಯಕ್ತಿತ್ವ ಹೊಂದಿದ್ದರು. ಅವರ ಆದರ್ಶಗಳಿಂದ ಪ್ರೇರಿತರಾಗಿ ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಪಂಚಾಯಿತಿಯೊಂದಿಗೆ ಸಂಪರ್ಕಿಸಿದಾಗ, ಮನೆ ಕುಸಿದು ಸಂಕಷ್ಟದಲ್ಲಿದ್ದ ಕೊರಗ ಸಮುದಾಯದ ಗಿರಿಜ ಅವರ ಕುಟುಂಬದ ಬಗ್ಗೆ ಮಾಹಿತಿ ದೊರೆಯಿತು. ಬಳಿಕ ಸುಮಾರು ₹10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಮೂಲ್ಕಿ–ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಹಿಂದಿನ ತಲೆಮಾರಿನವರು ಬಡತನದಲ್ಲಿಯೂ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುತ್ತಿದ್ದರು. ಅದೇ ಸಂಸ್ಕಾರದ ಫಲವಾಗಿ ಇಂತಹ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಇಂದಿನ ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ಸಮಾಜಸೇವೆಯ ಮನೋಭಾವವನ್ನೂ ಬೆಳೆಸಬೇಕು ಎಂದು ಕರೆ ನೀಡಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಹೆತ್ತವರ ಆದರ್ಶಗಳನ್ನು ಉಳಿಸಿಕೊಂಡು ಅವರ ಸ್ಮರಣಾರ್ಥ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಕಾರ್ಯ. ಇದು ನಿಜವಾದ ದೇವರ ಸೇವೆಯಾಗಿದ್ದು, ಈ ಕುಟುಂಬದ ಸೇವಾ ಮನೋಭಾವ ಇತರರಿಗೂ ಮಾದರಿಯಾಗಲಿ ಎಂದು ಹಾರೈಸಿದರು.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ಸಮಾಜದಲ್ಲಿ ಜಾತಿ-ಮತ ಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅನೇಕ ಬಡ ಕುಟುಂಬಗಳ ಬದುಕಿನಲ್ಲಿ ಬೆಳಕು ಮೂಡಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಉದ್ಯಮಿ ಇಬ್ರಾಹಿಂ ಗಡಿಯಾರ್, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ, ಮಂಜುನಾಥ್ ಭಂಡಾರಿ ಶೆಡ್ಡೆ, ಮಹೇಶ್ವರಪ್ಪ, ಪಿಡಿಒ ಜಯಪ್ರಕಾಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದೇವರು ಮೆಚ್ಚುವ ಕೆಲಸ

ಮೂಡುಶೆಡ್ಡೆ ನೇಜಿಗುರಿಯ ಕೊರಗ ಸಮುದಾಯದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿರುವುದು ದೇವರು ಮೆಚ್ಚುವ ಕೆಲಸ. ಸಮಾಜದ ಅಶಕ್ತರು ಮತ್ತು ನೊಂದವರಿಗೆ ನೆರವಾಗುವ ಮನೋಭಾವ ಬೆಳೆಸಿದರೆ ದೇವರ ಆಶೀರ್ವಾದ ಸದಾ ಇರುತ್ತದೆ. ಉಮೇಶ್ ಶೆಟ್ಟಿ ಹಾಗೂ ಅವರ ಕುಟುಂಬಕ್ಕೆ ಇನ್ನಷ್ಟು ಸಮಾಜಸೇವೆ ಮಾಡುವ ಶಕ್ತಿ ದೊರೆಯಲಿ.

ರಮೇಶ್ ಎದುರುಪದವು, ಮಾಜಿ ಜಿಲ್ಲಾಧ್ಯಕ್ಷ, ಕೊರಗ ಸಂಘ

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *