ಕಾರವಾರ: ಮಹಿಳಾ ಪ್ರಯಾಣಿಕರ ಸುರಕ್ಷತೆ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಕಾರವಾರ ರೈಲು ನಿಲ್ದಾಣದಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಪಿಂಕ್ ಬಬಲ್’ ವಿಶ್ರಾಂತಿ ಆಸನ ವ್ಯವಸ್ಥೆ ನಿರ್ಮಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕಾರವಾರ ರೋಟರಿ ಕ್ಲಬ್ ವತಿಯಿಂದ ಸುಮಾರು ₹1 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ‘ಪಿಂಕ್ ಬಬಲ್’ ಸೌಲಭ್ಯವನ್ನು ಗುರುವಾರ ಉದ್ಘಾಟಿಸಿ ಹಾಗೂ ಕಾರವಾರ–ಮಡಗಾಂವ್ ಖಾಯಂ ರೈಲು ಸೇವೆಯನ್ನು ಸ್ವಾಗತಿಸಿ ಅವರು ಮಾತನಾಡಿದರು.
ರೈಲು ಬರುವವರೆಗೆ ಮಹಿಳೆಯರು ಸುರಕ್ಷಿತ ಹಾಗೂ ಸುಸಜ್ಜಿತ ವಾತಾವರಣದಲ್ಲಿ ನಿರಾಳವಾಗಿ ಕಾಯುವಂತಾಗಲು ಈ ವ್ಯವಸ್ಥೆ ರೂಪಿಸಲಾಗಿದೆ. ಮಹಿಳೆಯರ ಭದ್ರತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಿರುಕುಳ ನೀಡುವವರ ವಿರುದ್ಧ ರೈಲ್ವೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ದೇಶಾದ್ಯಂತ ತಾತ್ಕಾಲಿಕ ರೈಲುಗಳ ಸಂಚಾರವನ್ನು ಖಾಯಂಗೊಳಿಸುವ ಕೇಂದ್ರದ ನಿರ್ಧಾರದ ಭಾಗವಾಗಿ ಮಡಗಾಂವ್–ಕಾರವಾರ ರೈಲು ಸೇವೆಯೂ ಈಗ ಶಾಶ್ವತ ಸೇವೆಯಾಗಿ ಮಾರ್ಪಟ್ಟಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಡಗಾಂವ್‌ನಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ರೈಲಿಗೆ ಚಾಲನೆ ನೀಡಿದ್ದಾರೆ. ಇದರಿಂದ ಗೋವಾ ಹಾಗೂ ಉತ್ತರ ಕನ್ನಡ ನಡುವಿನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದ್ದು, ಉದ್ಯೋಗಿಗಳು, ವ್ಯಾಪಾರಿಗಳು, ಪ್ರವಾಸಿಗರು ಹಾಗೂ ವಿವಿಧ ಕ್ಷೇತ್ರಗಳ ವೃತ್ತಿಪರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕಾರವಾರ ರೈಲು ನಿಲ್ದಾಣದಲ್ಲಿರುವ ಕಾಯ್ದಿರಿಸಿದ ವಿಶ್ರಾಂತಿ ಕೊಠಡಿಯನ್ನು ಮೇಲ್ದರ್ಜೆಗೆ ಏರಿಸಿ ಎಸಿ ಕೊಠಡಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಹಿರಿಯ ನಾಗರಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಪ್ಲಾಟ್‌ಫಾರ್ಮ್‌ಗಳ ನಡುವೆ ಲಿಫ್ಟ್ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ಇದೆ. ಜೊತೆಗೆ ರೈಲು ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ರೈಲು ಯೋಜನೆಗಳಿಗೆ ವೇಗ
ಸಂಸದನಾದ ಬಳಿಕ ದಾಂಡೇಲಿ–ಆಳ್ನಾವರ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ತಾಳಗುಪ್ಪ–ಸಿದ್ದಾಪುರ–ಶಿರಸಿ–ಕುಮಟಾ ಹಾಗೂ ಮುಂಡಗೋಡ–ತಡಸ್ ಮೂಲಕ ಹುಬ್ಬಳ್ಳಿ ಸಂಪರ್ಕಿಸುವ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದೆ. ಅಂಕೋಲಾ–ಹುಬ್ಬಳ್ಳಿ ರೈಲು ಮಾರ್ಗ ಖಂಡಿತ ಸಾಕಾರಗೊಳ್ಳಲಿದೆ. ತಾಳಗುಪ್ಪ–ಹೊನ್ನಾವರ ರೈಲು ಮಾರ್ಗಕ್ಕೂ ಸಮೀಕ್ಷೆ ನಡೆಸಲಾಗಿದೆ ಎಂದು ಕಾಗೇರಿ ಹೇಳಿದರು.
ಕೊಂಕಣ ರೈಲ್ವೆ ಅಭಿವೃದ್ಧಿಗೆ ₹7 ಸಾವಿರ ಕೋಟಿ ಗುರಿ
ಕೊಂಕಣ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ ಸುಮಾರು ₹7 ಸಾವಿರ ಕೋಟಿ ಅನುದಾನ ತರಲು ಪ್ರಯತ್ನ ನಡೆಯುತ್ತಿದೆ. ಈ ಅನುದಾನದಡಿ ರೈಲು ನಿಲ್ದಾಣಗಳ ಆಧುನೀಕರಣ, ಎರಡನೇ ಪ್ಲಾಟ್‌ಫಾರ್ಮ್ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕುಮಟಾ ಹಾಗೂ ಗೋಕರ್ಣ ರೈಲು ನಿಲ್ದಾಣಗಳಲ್ಲಿ ಎರಡನೇ ಪ್ಲಾಟ್‌ಫಾರ್ಮ್ ನಿರ್ಮಾಣ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ. ಮುರುಡೇಶ್ವರ ಹಾಗೂ ಭಟ್ಕಳ ರೈಲು ನಿಲ್ದಾಣಗಳಲ್ಲಿಯೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಎಂಜಿನಿಯರ್ ಎಲ್. ಪ್ರಕಾಶ್, ಉಪ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಪಿ. ಚಿತ್ರಸೇನ್, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜಿ.ಡಿ. ಮೀನಾ, ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಸುಧಾ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಲ್ಲಾಭಕ್ಷ, ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವರು ಇದ್ದರು.
What do you feel about this post?
Like
Love
Happy
Haha
Sad
