ದ.ಕ ಸೇರಿದಂತೆ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಪರಿಹಾರ ನೀಡುವಂತೆ ಸಂಸದ ಬ್ರಿಜೇಶ್ ಚೌಟ ಮನವಿ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ರಾಜ್ಯ ಶಿರಸಿ
<

Spread the love

ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಸಾವಿರಾರು ಅಡಿಕೆ ಬೆಳೆಗಾರರನ್ನು ಕಂಗೆಡಿಸಿರುವ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

<

ಅಡಿಕೆ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಹಳದಿ ಎಲೆ ರೋಗವು ವ್ಯಾಪಕವಾಗಿ ಹರಡಿದ್ದು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶದ ಅಡಿಕೆ ತೋಟಗಳು ಬಾಧಿತವಾಗಿವೆ. ಇದರಿಂದ ಲಕ್ಷಾಂತರ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ.

ರೋಗಕ್ಕೆ ಕಾರಣವಾಗಿರುವ ಫೈಟೋಪ್ಲಾಸ್ಮಾ ಸೋಂಕು ನಿರ್ಮೂಲನೆಗೆ ಇನ್ನೂ ಪರಿಣಾಮಕಾರಿ ಔಷಧಿ ಲಭ್ಯವಿಲ್ಲ. ಆದರೆ, ಐಸಿಎಆರ್–ಸಿಪಿಸಿಆರ್‌ಐ ಅಭಿವೃದ್ಧಿಪಡಿಸಿರುವ ನಿರ್ವಹಣಾ ವಿಧಾನಗಳು ರೈತರಿಗೆ ಆಶಾಕಿರಣವಾಗಿವೆ. ಹಳದಿ ರೋಗವನ್ನು ತಡೆದುಕೊಳ್ಳಬಲ್ಲ ಗಿಡಗಳ ಅಂಗಾಂಶ ಕೃಷಿ ತಂತ್ರಜ್ಞಾನವೂ ಯಶಸ್ವಿಯಾಗಿದ್ದು, ಇದನ್ನು ರೈತರ ಮಟ್ಟಕ್ಕೆ ತಲುಪಿಸಲು ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹರಡುತ್ತಿರುವ ಎಲೆ ಚುಕ್ಕಿ ರೋಗದ ಸಮಸ್ಯೆಯನ್ನೂ ಸಚಿವರ ಗಮನಕ್ಕೆ ತಂದಿದ್ದಾರೆ. 2023ರಲ್ಲಿ ಕೇಂದ್ರ ಸರ್ಕಾರ 225 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರೂ, ತಾಂತ್ರಿಕ ಕಾರಣಗಳಿಂದ ಅದು ಬಳಕೆಯಾಗದೆ ವಾಪಸ್ ಹೋಗಿರುವುದನ್ನು ಉಲ್ಲೇಖಿಸಿದ್ದಾರೆ. ಸಿಪಿಸಿಆರ್‌ಐ ಶಿಫಾರಸು ಮಾಡಿದ ವೆಚ್ಚಕ್ಕೆ ಅನುಗುಣವಾಗಿ ವಿಶೇಷ ವಿನಾಯಿತಿ ನೀಡಿ ಅನುದಾನವನ್ನು ಮರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕರಾವಳಿ ಕರ್ನಾಟಕದ ಅಡಿಕೆ ಕೃಷಿಯ ವಾಸ್ತವಿಕ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಮಂಗಳೂರಿಗೆ ಭೇಟಿ ನೀಡುವಂತೆ ಕೇಂದ್ರ ಕೃಷಿ ಸಚಿವರಿಗೆ ಆಹ್ವಾನಿಸಿದ್ದು, ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ಸಮನ್ವಯದೊಂದಿಗೆ ಜಂಟಿ ಕಾರ್ಯಯೋಜನೆ ರೂಪಿಸಿದರೆ ರೈತರ ಸಂಕಷ್ಟ ನಿವಾರಣೆಗೆ ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *