ದ.ಕ ಜಿಲ್ಲೆಯಲ್ಲಿ ರೈತರ ಸಹಾಯಕ್ಕೆ ಕೃಷಿ ಇಲಾಖೆ ಸಜ್ಜು, ಬಿತ್ತನೆ ಬೀಜ, ಗೊಬ್ಬರ ದಾಸ್ತಾನು, ಎಂಒ 4 ಭತ್ತದ ತಳಿಗೆ ಬೇಡಿಕೆ

ಕೃಷಿ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ
<

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸು ಪಡೆದುಕೊಂಡಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಹದವಾದ ಮಳೆಯಿಂದಾಗಿ ಕೃಷಿಕರು ಭತ್ತದ ನಾಟಿ ಸೇರಿದಂತೆ ವಿವಿಧ ಕೃಷಿ ಕಾರ್ಯಗಳನ್ನು ಆರಂಭಿಸಿದ್ದಾರೆ. ಬೀಜ, ಗೊಬ್ಬರ ಖರೀದಿ ಭರಾಟೆ ಜೋರಾಗಿದೆ.

<

ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಕೃಷಿ ಭೂಮಿ ಇದ್ದು, 46 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಆಗಿದೆ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಮಾಡಲಾಗಿದೆ. ಕೃಷಿ ಚಟುವಟಿಕೆಗಾಗಿ ರೈತರ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಗಳನ್ನು ಸಂಪರ್ಕ ಮಾಡುವ ಮೂಲಕ ಕೃಷಿಗೆ ಬೇಕಾದ ಅಗತ್ಯ ಮಾಹಿತಿ ಪಡೆದುಕೊಂಡು, ಬೀಜ ಹಾಗೂ ಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ.

ರೈತರಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಕೃಷಿ ಇಲಾಖೆ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದ್ದು, ವಿತರಣೆ ಕಾರ್ಯ ಕೂಡ ನಡೆದಿದೆ. ಈ ಬಾರಿ 9750 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಹಾಗೂ ನಾಟಿ ಮಾಡುವ ಗುರಿ ಇಟ್ಟುಕೊಂಡಿದ್ದು, ಒಟ್ಟು 832.5 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಈಗಾಗಲೇ 703. 5 ಕ್ವಿಂಟಲ್ ಬಿತ್ತನೆ ಬೀಜ ಇಲಾಖೆಗೆ ಬಂದಿದೆ.

412. 5 ಕ್ವಿಂಟಲ್ ಬಿತ್ತನೆ ಬೀಜಗಳನ್ನು ಸುಮಾರು 895 ಮಂದಿ ರೈತರಿಗೆ ಹಂಚಿಕೆ ಮಾಡಲಾಗಿದೆ. ಇನ್ನು 291 ಕ್ವಿಂಟಲ್ ಬೀಜದ ದಾಸ್ತಾನು ಇದೆ. ಜಿಲ್ಲೆಗೆ ಬೇಕಾದಷ್ಟು ಸುಮಾರು 15 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಮಾಡಲಾಗಿದೆ. ಜಿಲ್ಲೆಯ ರೈತರಿಗೆ ಅಗತ್ಯಕ್ಕೆ ತಕ್ಕಷ್ಟು ಬೀಜ ಹಾಗೂ ಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಹೊಲಗಳನ್ನು ಅಣಿಗೊಳಿಸಿಕೊಂಡಿದ್ದು, ಮಳೆ ಅಬ್ಬರ ಕೂಡ ಕ್ರಮೇಣವಾಗಿ ತೀವ್ರತೆ ಪಡೆಯುತ್ತಿದೆ. ಭತ್ತದ ಜೊತೆಗೆ ಅಡಿಕೆ, ರಬ್ಬರ್ ಹಾಗೂ ತೋಟಗಾರಿಕಾ ಬೆಳೆಗಳಿಗೂ ಮಳೆ ಅನುಕೂಲಕರ ಆಗಿದೆ.

ಇನ್ನು ಜಿಲ್ಲೆಯ ಮೂಲ್ಕಿ, ಮೂಡುಬಿದಿರೆ, ಉಳ್ಳಾಲ, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಕೃಷಿ ಚಟುವಟಿಕೆ ಈಗ ತಾನೇ ಚುರುಕು ಪಡೆಯುತ್ತಿದ್ದು, ಬಿತ್ತನೆ ಬೀಜ ಹಾಗೂ ಗೊಬ್ಬರದ ಸಮಸ್ಯೆ ಸದ್ಯಕ್ಕೆ ತಟ್ಟಿಲ್ಲ, ಕೃಷಿಕರಿಗೆ ಬೇಕಾದಷ್ಟು ದಾಸ್ತಾನು ಕೂಡ ಮಾಡಲಾಗಿದೆ. ಹೆಚ್ಚು ರೈತರು ಎಂಒ 4, ಸಹ್ಯಾದ್ರಿ ಬ್ರಹ್ಮ, ಸಹ್ಯಾದ್ರಿ ಕೆಂಪು ಮುಕ್ತಿ ಬೀಜದ ತಳಿಗಳನ್ನು ಬಿತ್ತನೆ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದಾರೆ. ಇದರ ಜತೆಗೆ ಜಯಾ ಹಾಗೂ ಜ್ಯೋತಿ ಭತ್ತದ ತಳಿಗಳನ್ನು ಬಿತ್ತನೆ ಮಾಡುತ್ತಿದ್ದಾರೆ.

ವೈವಿಧ್ಯ ತಳಿಗಳ ಬಿತ್ತನೆ ಬೀಜ ಸಂಗ್ರಹ

ರೈತರಿಗೆ ಬೇಕಾಗುಷ್ಟು ಬಿತ್ತನೆ ಬೀಜವನ್ನು ತರಿಸಲಾಗಿದೆ ಈಗಾಗಲೇ 400 ಕ್ವಿಂಟಲ್ ಭತ್ತದ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಈ ಬಾರಿ ವೈವಿಧ್ಯಮಯ ತಳಿಗಳನ್ನು ಕೂಡ ಆಯ್ಕೆ ಮಾಡಿಕೊಂಡು ಬಿತ್ತನೆ ಬೀಜವನ್ನು ತರಿಸಲಾಗಿದೆ. ಇನ್ನು ಕೂಡ 100 ಕ್ವಿಂಟಲ್ ದಾಸ್ತಾನು ಇದೇ. ಇನ್ನು ಗೊಬ್ಬರ ಕೂಡ ದಾಸ್ತಾನು ಮಾಡಲಾಗಿದೆ. ಈ ಬಾರಿ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.

ವೀಣಾ, ಕೃಷಿ ಇಲಾಖೆಯ ಸಹಾಯಕಿ ನಿರ್ದೇಶಕಿ

10 ಸಾವಿರ ಹೆಕ್ಟೇರ್ ಗುರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕೃಷಿ ಚಟುವಟಿಕೆ ಶುರು ಆಗಿದ್ದು, ರೈತರಿಗೆ ಅಗತ್ಯಕ್ಕೆ ತಕ್ಕಷ್ಟು ಬಿತ್ತನೆ ಬೀಜಗಳನ್ನು ತರಿಸಲಾಗಿದೆ. ಈ ಬಾರಿ 10 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡುವ ಗುರಿ ಹೊಂದಲಾಗಿದ್ದು, 46 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಆಗಿದೆ. ಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಇಡಲಾಗಿದೆ. ಈಗಾಗಲೇ ಜಿಲ್ಲೆಯ ರೈತರು ಆಯಾ ಭಾಗದ ರೈತ ಸಂಪರ್ಕ ಹಾಗೂ ಕೃಷಿ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯುತ್ತಿದ್ದಾರೆ.

ಹೊನ್ನಪ್ಪ ಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *