ಕಾರವಾರ: ಜಿಲ್ಲೆಯ ಎಲ್ಲಾ ನಗರಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಕಾರವಾರ ಇವರ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು/ಪೌರಕಾರ್ಮಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮ ಹಾಗೂ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ನಗರಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳನ್ನು ಬಳಕೆ ಮಾಡುವಂತೆ ಸೂಚಿಸಿದ ಅವರು, ಕಾರ್ಮಿಕರಿಗೆ ನಿಯಮಿತ ಆರೋಗ್ಯ ತಪಾಸಣೆ, ದೈನಂದಿನ ಉಪಹಾರ, ಸಂಕಷ್ಟ ಭತ್ಯೆ, ಸುರಕ್ಷತಾ ಉಪಕರಣಗಳನ್ನು ನೀಡಬೇಕು. ಸಕಾಲದಲ್ಲಿ ವೇತನ ಪಾವತಿಸಬೇಕು, ಸ್ಯಾಲರಿ ಸ್ಲಿಪ್ ನೀಡಬೇಕು, ಗುತ್ತಿಗೆ ಕಾರ್ಮಿಕರಿಗೆ ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡಬೇಕು ಇದರಲ್ಲಿ ವ್ಯತ್ಯಯ ಕಂಡುಬಂದಲ್ಲಿ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿ ಎಂದರು.
ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ಬೆಳಗಿನ ಉಪಹಾರ ನೀಡುವ ಯೋಜನೆಯಲ್ಲಿ ಪೌರಕಾರ್ಮಿಕರಿಗೆ 2 ತಿಂಗಳಿಂದ ಉಪಹಾರ ನೀಡದ ಬಗ್ಗೆ ಪರಿಶೀಲಿಸಿದ ಅವರು, ಗುತ್ತಿಗೆದಾರರ ಸಮಸ್ಯೆಯಿಂದ ಕಾರ್ಮಿಕರಿಗೆ ತೊಂದರೆ ಆಗಬಾರದು, ಕೂಡಲೇ ಟೆಂಡರ್‌ದಾರರನ್ನು ಬದಲಾಯಿಸಿ ನಾಳೆಯಿಂದಲೇ ಕಾರ್ಮಿಕರಿಗೆ ಉಪಹಾರ ಒದಗಿಸಬೇಕು ಮತ್ತು ಎರಡು ತಿಂಗಳ ಭತ್ಯೆಯನ್ನು ನಗದಾಗಿ ಕಾರ್ಮಿಕರಿಗೆ ವಿತರಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ದತಿ ಇಲ್ಲ. ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ನಿಯಮಿತವಾಗಿ ಸಫಾಯಿ ಕರ್ಮಚಾರಿಗಳ ಕುರಿತು ಸಭೆ ನಡೆಸಲಾಗುತ್ತಿದ್ದು, ಅವರ ಕುಂದುಕೊರತೆಗಳನ್ನು ಬಗೆಹರಿಸಲಾಗುತ್ತಿದೆ. ಮನೆಗಳ ನಿರ್ಮಾಣ ಮತ್ತು ಹಂಚಿಕೆ ಕುರಿತ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದ್ದು, ಪೂರ್ಣಗೊಂಡ ಮನೆಗಳನ್ನು ಹಸ್ತಾಂತರ ಮಾಡಲಾಗುವುದು. ಮನೆಗಳ ಕಾಮಗಾರಿಯ ಗುಣಮಟ್ದ ಕುರಿತಂತೆ ಪರಿಶೀಲನೆ ಮಾಡಲಾಗುವುದು, ಎಲ್ಲಾ ಪೌರಕಾರ್ಮಿಕರಿಗೆ ವಿಮೆ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಆಯೋಗದ ಸದಸ್ಯ ಶಂಕರ್, ಸಂಶೋಧನಾ ಅಧಿಕಾರಿ ಮಹಾದೇವ ಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ (ಪ್ರಭಾರ) ಸಾಜಿದ್ ಮುಲ್ಲಾ, ಉಪವಿಭಾಗಾಧಿಕಾರಿಗಳಾದ ಚಂದ್ರಶೇಖರ್, ಮಹೇಶ್, ಹೆಚ್ಚವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ , ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಹಾಗೂ ಎಲ್ಲ ನಗರಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು/ ಮುಖ್ಯಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
What do you feel about this post?
Like
Love
Happy
Haha
Sad
