ಮಂಗಳೂರು: ಜಾಗತಿಕ ಆರ್ಥಿಕ ಹಿಂಜರಿತ, ಇಂಧನ ಬಿಕ್ಕಟ್ಟು ಹಾಗೂ ವಿವಿಧ ಅಂತರ ರಾಷ್ಟ್ರೀಯ ಸಂಘರ್ಷಗಳ ನಡುವೆಯೂ ಭಾರತಶೇ 7.7 ರ ಆರ್ಥಿಕ ಬೆಳವಣಿಗೆ ದರವನ್ನು ಸಾಧಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಹಾಗೂ ಗೃಹ ಸಚಿವಾಲಯದ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2013–14ರಲ್ಲಿ 1.9 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದ್ದ ಭಾರತ ಈಗ 4.1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆದಿದೆ. ಭಾರತದ ಬೆಳವಣಿಗೆ ದರವು ಅಮೆರಿಕದ ಶೇ 2.6 ಚೀನಾದ ಶೇ 4.4ಹಾಗೂ ಜಪಾನ್ನ ಶೇ 0.7 ಗಿಂತ ಹೆಚ್ಚು ಇದೆ ಎಂದು ಅವರು ಹೋಲಿಕೆ ನೀಡಿದ ಅವರು, ಈ ಬೆಳವಣಿಗೆ ಮುಂದುವರೆದರೆ 2031ರ ವೇಳೆಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಶಕ್ತಿ ಆಗಲಿದೆ ಎಂದರು.
12 ವರ್ಷಗಳಲ್ಲಿ ದೇಶದಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ಇದೇ ಅವಧಿಯಲ್ಲಿ ನಿರುದ್ಯೋಗ ದರ ಶೇ 5.1 ಹಾಗೂ ಹಣದುಬ್ಬರ ದರ ಶೇ 4.5 ಇದೆ. ತಲಾ ಆದಾಯ 49,000 ರೂಪಾಯಿಯಿಂದ 2.35 ಲಕ್ಷ ರೂಪಾಯಿಗೆ ಏರಿಕೆಯಾಗಿದೆ ಎಂದರು.
ದೇಶದಲ್ಲಿ ಮೂಲಸೌಕರ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಬೆಳವಣಿಗೆ ಕಂಡು ಬಂದಿದೆ. 4 ಕೋಟಿ ಮನೆಗಳು ನಿರ್ಮಾಣವಾಗಿವೆ, 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಹಾಗೂ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ ಎಂದು ತಿಳಿಸಿದರು. ದೇಶದ ಎಲ್ಲ ಹಳ್ಳಿಗಳು ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿ ಜನರಿಗೆ 5 ಲಕ್ಷ ರೂಪಾಯಿವರೆಗೆ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು. ಜೊತೆಗೆ 10.50 ಕೋಟಿ ಜನರಿಗೆ ಉಚಿತ ಅನಿಲ ಸಂಪರ್ಕ ಹಾಗೂ ಸಿಲಿಂಡರ್ ಸಬ್ಸಿಡಿ ನೀಡಲಾಗಿದೆ ಎಂದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿಯೂ ವಿಸ್ತರಣೆ ಕಂಡುಬಂದಿದೆ ಎಂದು ಹೇಳಿದ ಅವರು, ಎಂ.ಬಿ.ಬಿ.ಎಸ್ ಸೀಟುಗಳು 51,348 ರಿಂದ 1,28,973ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದರು. ಎಂ.ಡಿ ಸೀಟುಗಳು 31,185 ರಿಂದ 85,822ಕ್ಕೆ ಹಾಗೂ ವೈದ್ಯಕೀಯ ಕಾಲೇಜುಗಳು 387 ರಿಂದ 790ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಏಮ್ಸ್ ಸಂಸ್ಥೆಗಳು 6 ರಿಂದ 23ಕ್ಕೆ ಹಾಗೂ ಐಐಟಿ ಸಂಸ್ಥೆಗಳು 16 ರಿಂದ 23ಕ್ಕೆ ಹೆಚ್ಚಳವಾಗಿದೆ ಎಂದು ವಿವರಿಸಿದರು. ವಿಶ್ವವಿದ್ಯಾಲಯಗಳ ಸಂಖ್ಯೆ 760 ರಿಂದ 1,338ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಕರ್ನಾಟಕಕ್ಕೆ ಕೇಂದ್ರ ಸರ್ಕಾರ 2014ರಿಂದ 4,01,717 ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ವೇ, ಬೆಂಗಳೂರು ರಿಂಗ್ ರಸ್ತೆ, ಮೈಸೂರು–ಬೆಂಗಳೂರು ಎಕ್ಸ್ಪ್ರೆಸ್ವೇ, ತುಮಕೂರು ಕೈಗಾರಿಕಾ ಕಾರಿಡಾರ್, ಹೊಸ ಬಂದರುಗಳು ಹಾಗೂ ಕಲಬುರಗಿಯ ಮೆಗಾ ಟೆಕ್ ಪಾರ್ಕ್ ಸೇರಿದಂತೆ ಹಲವು ಯೋಜನೆಗಳು ಜಾರಿಯಲ್ಲಿವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಜನಧನ್ ಯೋಜನೆಯಡಿ 2.12 ಕೋಟಿ ಖಾತೆಗಳು, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ 1.67 ಕೋಟಿ ನೋಂದಣಿ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 2.60 ಕೋಟಿ ನೋಂದಣಿ ನಡೆದಿವೆ. ಮುದ್ರಾ ಯೋಜನೆಯಡಿ 3.39 ಲಕ್ಷ ಕೋಟಿ ರೂಪಾಯಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಅಟಲ್ ಪಿಂಚಣಿ ಯೋಜನೆಯಡಿ 48.9 ಲಕ್ಷ ಚಂದಾದಾರರು, ಸ್ವನಿಧಿ ಯೋಜನೆಯಡಿ 6.14 ಲಕ್ಷ ಫಲಾನುಭವಿಗಳು, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 31.7 ಲಕ್ಷ ಫಲಾನುಭವಿಗಳು ಇದ್ದಾರೆ ಎಂದು ಅವರು ಹೇಳಿದರು. ಜಲ ಜೀವನ ಮಿಷನ್ ಯೋಜನೆಯಡಿ 87.7 ಲಕ್ಷ ಗ್ರಾಮೀಣ ಮನೆಗಳಿಗೆ ನಳ ಸಂಪರ್ಕ ಒದಗಿಸಲಾಗಿದೆ ಎಂದು ವಿವರಿಸಿದರು.
ಉಜ್ವಲ ಯೋಜನೆಯಡಿ 41.4 ಲಕ್ಷ ಎಲ್ಪಿಜಿ ಸಂಪರ್ಕ, ಆಯುಷ್ಮಾನ್ ಭಾರತ್ ಯೋಜನೆಯಡಿ 1.89 ಕೋಟಿ ಕಾರ್ಡ್ಗಳು ಹಾಗೂ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 402 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ 43.2 ಲಕ್ಷ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ,, ರಾಜೇಶ್ ನಾಯ್ಕ್, ಕಿಶೋರ್ ಕುಮಾರ್, ಪ್ರತಾಪ್ ಸಿಂಹ ನಾಯಕ್, ಉಮಾನಾಥ ಕೋಟ್ಯಾನ್, ಸಂಸದ ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಕುಂಪಲ್ ಸೇರಿದಂತೆ ಹಲವರ ಇದ್ದರು.
What do you feel about this post?
Like
Love
Happy
Haha
Sad
