ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಗಾಳಿ ಹಾಗೂ ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಭೂ ಕುಸಿತ ಹಾಗೂ ರಸ್ತೆ ಅಪಘಾತಗಳ ಅಪಾಯ ಹೆಚ್ಚುವ ಸಾಧ್ಯತೆ ಇರುವ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ 16 ಸೂಕ್ಷ್ಮ ಪ್ರದೇಶಗಳಲ್ಲಿ ಜುಲೈ 6 ರಿಂದ ಮಳೆಗಾಲ ಅಂತ್ಯ ಆಗುವವರಿಗೆ ಎಲ್ಲ ರೀತಿಯ ವಾಹನಗಳ ನಿಲುಗಡೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.

ಎಲ್ಲೆಲ್ಲಿ ನಿಷೇಧ: ಕಾರವಾರ ತಾಲೂಕಿನ ಲಂಡನ್ ಬ್ರಿಡ್ಜ್‌ನಿಂದ ಬಿನಾಗಾ ಸುರಂಗದವರೆಗೆ 750 ಮೀಟರ್, ಅಗಾರ್‌ನ ಸಂಕುಬಾಗ ಘಾಟ್‌ನಲ್ಲಿ 100 ಮೀಟರ್, ಅಂಕೋಲಾದ ಶಿರೂರು ಗ್ರಾಮದ ಬಳಿ 1 ಕಿ.ಮೀ, ಬೆಳಸೆ ರೈಲ್ವೆ ಸೇತುವೆ ಬಳಿ 1 ಕಿ.ಮೀ ಸೇರಿದಂತೆ ಹೊನ್ನಾವರ, ಕುಮಟಾ, ಸಿರಸಿ ತಾಲೂಕಿನ ಎನ್‌ಎಚ್-66, ಎನ್‌ಎಚ್-69 ಹಾಗೂ ಎನ್‌ಎಚ್-766(ಎ) ರಸ್ತೆಯ ಗುಡ್ಡಗಾಡು ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳಾವಾರು 30 ಮೀಟರ್‌ನಿಂದ 1 ಕಿ.ಮೀ ವ್ಯಾಪ್ತಿವರೆಗೆ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ. ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದ್ದು, ನಿಷೇಧಿತ ಪ್ರದೇಶಗಳಲ್ಲಿ ಅಗತ್ಯ ಸೂಚನಾ ಫಲಕಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad



