ಎಸ್‌ಐಆರ್ ನಲ್ಲಿಯೂ ಬಿಜೆಪಿ ರಾಜಕೀಯ, ಪ್ರಕ್ರಿಯೆ ಪಕ್ಷಾತೀತವಾಗಿ ನಡೆಯಲಿ: ಮಾಜಿ ಸಚಿವ ರಮಾನಾಥ ರೈ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಮಂಗಳೂರು: ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಪಾರದರ್ಶಕ ಹಾಗೂ ಪಕ್ಷಾತೀತವಾಗಿ ನಡೆಯಬೇಕು. ಯಾವುದೇ ಅರ್ಹ ಮತದಾರನ ಹೆಸರು ಪಟ್ಟಿಯಿಂದ ಕೈ ಬಿಡದಂತೆ ಚುನಾವಣಾ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

<

ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲ ಹಕ್ಕು. ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟರೆ ಅದು ಅವರ ಪ್ರಜಾಸತ್ತಾತ್ಮಕ ಹಕ್ಕು ಕಸಿದಂತೆ. ಆದ್ದರಿಂದ ಎಸ್‌ಐಆರ್ ಪ್ರಕ್ರಿಯೆ ಯಾವುದೇ ಗೊಂದಲ ಅಥವಾ ರಾಜಕೀಯ ಪ್ರಭಾವವಿಲ್ಲದೆ ನಡೆಯಬೇಕು ಎಂದರು.

ಬಿಎಲ್‌ಒಗಳ ಕಾರ್ಯವೈಖರಿ ಕುರಿತು ಬಿಜೆಪಿ ಮಾಡುತ್ತಿರುವ ಆರೋಪ ಸರಿಯಲ್ಲ. ಬಿಎಲ್‌ಒಗಳು ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಗಳಲ್ಲ. ಕಾಂಗ್ರೆಸ್ ಬೆಂಬಲಿಗರಿರುವ ಪ್ರದೇಶಗಳಲ್ಲಿ ಮಾತ್ರ ಅರ್ಜಿಗಳನ್ನು ವಿತರಿಸಲಾಗಿದೆ ಎಂಬ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆಯಂತಹ ಆಡಳಿತಾತ್ಮಕ ಪ್ರಕ್ರಿಯೆಯಲ್ಲೂ ಬಿಜೆಪಿ ರಾಜಕೀಯ ಹಾಗೂ ಕೋಮುವಾದ ಬೆರೆಸಲು ಪ್ರಯತ್ನಿಸುತ್ತಿದೆ ಎಂದರು.

ಎಸ್‌ಐಆರ್ ಪ್ರಕ್ರಿಯೆ ಆನ್‌ಲೈನ್‌ನಲ್ಲೂ ಲಭ್ಯವಿದ್ದು, ಸಾರ್ವಜನಿಕರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬಾರದು. ಜಿಲ್ಲೆಯಲ್ಲಿ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಿ ರಾಜ್ಯದಲ್ಲೇ ಮಾದರಿ ಆಗುವ ವಿಶ್ವಾಸವಿದೆ ಎಂದರು.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸಾಕಷ್ಟು ದಾಖಲೆಗಳು ಅಗತ್ಯವಿದ್ದರೂ, ಹೆಸರು ತೆಗೆದುಹಾಕುವುದು ಸುಲಭವಾಗುವ ಕಾರಣ ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಬಿಎಲ್‌ಒಗಳೊಂದಿಗೆ ಎಲ್ಲ ರಾಜಕೀಯ ಪಕ್ಷಗಳ ಬಿಎಲ್‌ಎಗಳಿಗೂ ಮನೆಮನೆಗೆ ಭೇಟಿ ನೀಡುವ ಅವಕಾಶ ನೀಡಲಾಗಿದ್ದು, ಕಾಂಗ್ರೆಸ್ ವತಿಯಿಂದಲೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
ಮಾಜಿ ಮೇಯರ್ ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಹರಿನಾಥ್, ಮಮತಾ ಗಟ್ಟಿ, ಮಂಜುಳಾ ನಾಯಕ್, ವಿಕಾಸ್ ಶೆಟ್ಟಿ, ಶುಭೋದಯ ಆಳ್ವ, ಸುಹಾನ್ ಆಳ್ವ ಇದ್ದರು.

ಹರಿಪ್ರಸಾದ್ ಹೇಳಿಕೆಗೆ ನನ್ನ ಸಹಮತ: ರೈ

ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಆಗಿರುವ ಲಾಭವನ್ನು ತೈಲ ಕಂಪನಿಗಳ ಬದಲಿಗೆ ಜನಸಾಮಾನ್ಯರಿಗೆ ನೀಡಬೇಕು. ದೇಶದ ಭದ್ರತೆ, ನುಸುಳುಕೋರರ ವಿಚಾರ ಹಾಗೂ ಅಯೋಧ್ಯೆ ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ಹಣಕಾಸು ನಿರ್ವಹಣೆ ಕುರಿತೂ ಕೇಂದ್ರ ಸರ್ಕಾರವನ್ನು ಟೀಕಿಸಿದರು. ಧರ್ಮ, ದೇಶ ಪ್ರೇಮದ ಹೆಸರಿನ ಜತೆಗೆ ಅಯೋಧ್ಯೆ ದೇವರ ಹೆಸರಿನಲ್ಲೂ ಲೂಟಿ ನಡೆದಿರುವುದು ಬೇಸರದ ಸಂಗತಿ. ಕೊಲ್ಲೂರು ದೇವಳದಿಂದ ಶಿಕ್ಷಣ ಸಂಸ್ಥೆಯೊಂದು ಚೆಕ್ ಮೂಲಕ ಊಟದ ಹಣ ಪಡೆಯುತ್ತಿದ್ದನ್ನು ನಿಲ್ಲಿಸಿದ್ದಕ್ಕೆ ನನ್ನನ್ನು ವಿರೋಧಿಸಲಾಯಿತು. ಆದರೆ, ಇದೀಗ ಧರ್ಮದ ಹೆಸರಿನಲ್ಲಿ ದೇವರ ಹುಂಡಿಗೆ ಕೈ ಹಾಕಿದ್ದಾರೆ. ಪಕ್ಷದ ಹುದ್ದೆಗೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗೆ ನನ್ನ ಸಹಮತವಿದೆ. ಹಿರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಅವಕಾಶ ನೀಡಬೇಕು ಎಂಬುದು ನನ್ನ ಬೇಡಿಕೆ ಕೂಡ ಇದೆ. ನಾನು ಮಂತ್ರಿಯಾಗಿ ಕೆಲಸ ಮಾಡಿದವನು. ನಿಗಮ ಮಂಡಳಿ ಹುದ್ದೆಗೆ ಆಸೆ ಪಡುವವನು ನಾನಲ್ಲ. ಕಾರ್ಯಕರ್ತರ ಜತೆಗಿದ್ದು ಕೆಲಸ ಮಾಡುತ್ತಿದ್ದೇನೆ ಎಂದು ರಮಾನಾಥ ರೈ ತಿಳಿಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *