ಮಂಗಳೂರು: ಮಂಗಳೂರು, ಬೆಂಗಳೂರು ಹಾಗೂ ನೆರೆಯ ಕೇರಳ ರಾಜ್ಯಕ್ಕೆ ಪೂರೈಕೆಯಾಗಬೇಕಿದ್ದ 5.20 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ ಮಾದಕ ದ್ರವ್ಯವನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಬಂಧನ ಮಾಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದರು.

ಡ್ರಗ್ಸ್ ಮುಕ್ತ ಮಂಗಳೂರು ಅಭಿಯಾನದ ಭಾಗವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧನ ಮಾಡಲಾಗಿದೆ. ಬಂಧಿತರನ್ನು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ನಿವಾಸಿ ಮುಹಮ್ಮದ್ ಅಲ್ಫಾ (28), ಉಜಿರೆ ಹಳೆಪೇಟೆ, ಲಾಯಿಲಾ ವಿವೇಕಾನಂದ ನಗರ ನಿವಾಸಿ ಮುಹಮ್ಮದ್ ಮುಸ್ತಫಾ (28) ಎಂಬುವವರು ಎಂದು ತಿಳಿಸಿದರು.
15 ದಿನಗಳ ಹಿಂದೆ ಎಂಡಿಎಂಎ ಮಾರಾಟ ಆರೋಪದಲ್ಲಿ ಅಣ್ಣಪ್ಪಸ್ವಾಮಿ ಎಂಬ ಡ್ರಗ್ ಪೆಡ್ಲರ್ ಅನ್ನು ಬಂಧಿಸಿ 15 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಆತನಿಗೆ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ ಜಾಲದ ಬೆನ್ನುಹತ್ತಿದ ಮಂಗಳೂರು ಸಿಸಿಬಿ ಪೊಲೀಸರು, ಆರೋಪಿಗಳು ನವದೆಹಲಿಯಿಂದ ಎಂಡಿಎಂಎ ಖರೀದಿಸಿ ಬೆಂಗಳೂರಿನ ಮೂಲಕ ಮಂಗಳೂರು ಹಾಗೂ ಕೇರಳಕ್ಕೆ ಸಾಗಿಸಲು ಮುಂದಾಗಿದ್ದ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ಮಾಡಲಾಗಿದೆ ಎಂದರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಯಿತು. ಆರೋಪಿಗಳಿಂದ 5 ಕೆಜಿ 196 ಗ್ರಾಂ ಎಂಡಿಎಂಎ, ಬ್ಯಾಗ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮುಹಮ್ಮದ್ ಅಲ್ಫಾ ವಿರುದ್ಧ ಈ ಹಿಂದೆ 2024 ರಲ್ಲಿ ಕೊಣಾಜೆ ಪೊಲೀಸ್ ಠಾಣೆ ಹಾಗೂ 2026 ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿ ಆಗಿರುವ ಶಂಕೆ ಇದ್ದು, ಅವರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಹಾಗೂ ಉಪ ಪೊಲೀಸ್ ಆಯುಕ್ತರಾದ ರವಿಶಂಕರ್ ಮತ್ತು ಮಿಥುನ್ ಇದ್ದರು.
What do you feel about this post?
Like
Love
Happy
Haha
Sad



