ಉಡುಪಿ: ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಳಿಕ ಉಡುಪಿ ಜಿಲ್ಲೆಯ ಕರಡು ಮತದಾರರ ಪಟ್ಟಿಯಲ್ಲಿ 10,00,545 ಮತದಾರರು ಸ್ಥಾನ ಪಡೆದಿದ್ದಾರೆ. ಜೂನ್ 16ರ ಹಿಂದಿನ ಪಟ್ಟಿಯಲ್ಲಿದ್ದ 10,63,876 ಮತದಾರರ ಪೈಕಿ 63,331 ಮಂದಿಯ ಹೆಸರು ವಿವಿಧ ಕಾರಣಗಳಿಂದ ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸೋಮವಾರ ತಿಳಿಸಿದರು.
ಎಸ್ಐಆರ್ ಪ್ರಕ್ರಿಯೆಯ ವಿವರ ನೀಡಿದ ಅವರು, ಗೈರು, ಸ್ಥಳಾಂತರ, ಮರಣ, ನಕಲಿ ಹಾಗೂ ಇತರೆ ಕಾರಣಗಳಿಂದ 63,331 ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಕರಡು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವವರ ಪೈಕಿ 97,706 ಮಂದಿಗೆ ನೋಟೀಸು ನೀಡಲಾಗುತ್ತಿದೆ. ಹಿಂದಿನ ಮತದಾರರ ಪಟ್ಟಿಯೊಂದಿಗೆ ಸಂಪರ್ಕ ಹೊಂದದಿರುವ 31,903 ಮಂದಿಯನ್ನು ‘ನೋ ಮ್ಯಾಪಿಂಗ್’ ಎಂದು ಗುರುತಿಸಲಾಗಿದೆ. 65,803 ಮಂದಿಯನ್ನು ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವ್ಯತ್ಯಾಸ) ಅಡಿಯಲ್ಲಿ ಗುರುತಿಸಲಾಗಿದ್ದು, ಇವರಿಗೂ ನೋಟಿಸ್ ನೀಡಲಾಗುತ್ತಿದೆ ಎಂದರು.


