ಕಾರವಾರ: ನಗರದ ಹೃದಯಭಾಗದಲ್ಲಿರುವ ಡಿಎಚ್‌ಒ ಕಚೇರಿಯಿಂದ ಕಾಜುಬಾಗ್ ಮುಲ್ಲಾ ಕ್ರಾಸ್‌ವರೆಗಿನ ಮುಖ್ಯ ರಸ್ತೆ ಕಳೆದ ಮೇ ತಿಂಗಳಿನಿಂದ ಹದಗೆಟ್ಟಿದ್ದು, ತಕ್ಷಣ ರಸ್ತೆ ದುರಸ್ತಿ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ರಸ್ತೆ ಬಂದ್ ಚಳವಳಿ ನಡೆಸಲಾಗುವುದು ಎಂದು ಸಮಾಜ ಸೇವಕ ಸೂರಜ್ ಕುರುಮಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆಯನ್ನು ಕಳೆದ ಮೇ ತಿಂಗಳಲ್ಲಿ ಅಗೆದು, ಅರ್ಧಂಬರ್ಧ ಮಣ್ಣು ತುಂಬಿಸಿ, ಅದರ ಮೇಲೆ ದಪ್ಪ ಜೆಲ್ಲಿ ಕಲ್ಲುಗಳನ್ನು ಹಾಕಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಎರಡು ಪಥದ ರಸ್ತೆ ಒಂದು ಪಥಕ್ಕೆ ಸೀಮಿತವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಜೆಲ್ಲಿ ಕಲ್ಲುಗಳ ಮೇಲೆ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ಬೀಳುತ್ತಿದ್ದು, ನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ವೃದ್ಧರು, ಮಹಿಳೆಯರು ಹಾಗೂ ಶಾಲಾ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸಲು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ರಸ್ತೆಯ ಸಮಸ್ಯೆ ಕುರಿತು ನಗರಸಭೆಯ ಗಮನಕ್ಕೆ ತಂದು, ದುರಸ್ತಿ ಕಾರ್ಯ ಆರಂಭಿಸಲು ಒಂದು ವಾರದ ಗಡುವು ನೀಡಲಾಗಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳು ಡಾಂಬರೀಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಗಡುವು ಮುಗಿದರೂ ಕಾಮಗಾರಿ ಆರಂಭಿಸಿಲ್ಲ. ರಸ್ತೆಯಲ್ಲಿರುವ ಜೆಲ್ಲಿ ಕಲ್ಲುಗಳನ್ನು ತೆರವುಗೊಳಿಸುವ ಕನಿಷ್ಠ ಕ್ರಮವನ್ನೂ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾರವಾರದ ನಾಗರಿಕರು, ನಿವಾಸಿಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ರಸ್ತೆ ಬಂದ್ ಚಳವಳಿ ನಡೆಸಲಾಗುವುದು. ಹದಗೆಟ್ಟಿರುವ ಇದೇ ರಸ್ತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಬೈಕ್ ಚಲಾಯಿಸುವಂತೆ ಹೇಳಿ, ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಹೋರಾಟವು ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ. ಸಾರ್ವಜನಿಕರ ಜೀವ ಹಾಗೂ ಸುರಕ್ಷತೆಯ ದೃಷ್ಟಿಯಿಂದ ರಸ್ತೆ ದುರಸ್ತಿಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದಿದ್ದಾರೆ.
ನಗರಸಭೆ ಕೂಡಲೇ ಎಚ್ಚೆತ್ತುಕೊಂಡು ರಸ್ತೆ ಡಾಂಬರೀಕರಣ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
What do you feel about this post?
Like
Love
Happy
Haha
Sad




