ಕಾರವಾರ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸುರಕ್ಷಿತ, ಅಪಘಾತರಹಿತ ಸಂಚಾರಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ಪೊಲೀಸ್ ಇಲಾಖೆ ಸೂಚಿಸುವ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರವಾರದ ಕಾಳಿ ಸೇತುವೆ ಮೇಲೆ ದ್ವಿಚಕ್ರ ವಾಹನಗಳು ಸಂಚರಿಸುವಾಗ ಬಲವಾದ ಗಾಳಿಯಿಂದ ಚಾಲನೆಗೆ ಅಡಚಣೆಯಾಗುತ್ತಿರುವ ಕುರಿತು ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಕುಮಟಾದಲ್ಲಿ ಅಗತ್ಯವಿರುವೆಡೆ ಡಿವೈಡರ್ ಹಾಗೂ ಬೀದಿ ದೀಪಗಳನ್ನು ಅಳವಡಿಸಬೇಕು. ನಗರದಲ್ಲಿ ಭಾರಿ ವಾಹನಗಳು ಹಾಗೂ ಇತರ ವಾಹನಗಳ ಓವರ್‌ಟೇಕ್ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕ ಸುರಕ್ಷತಾ ಕ್ರಮಗಳ ಮೂಲಕ ಅಪಘಾತಗಳನ್ನು ತಡೆಯಬೇಕು ಎಂದು ಸೂಚಿಸಿದರು.
ಕಾರವಾರದ ಫ್ಲೈಓವರ್ ಕೆಳಗೆ ಅನಧಿಕೃತ ವಾಹನ ನಿಲುಗಡೆ, ಅಂಗಡಿಗಳು ಹಾಗೂ ಜನವಸತಿ ಕಂಡುಬರುತ್ತಿರುವುದನ್ನು ತಡೆಯಲು ಫೆನ್ಸಿಂಗ್ ಅಳವಡಿಸಿ, ಗಾರ್ಡನಿಂಗ್ ಹಾಗೂ ಸಾರ್ವಜನಿಕರಿಗೆ ವಾಕಿಂಗ್ ಪಾಥ್ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಮುರುಡೇಶ್ವರ ಮತ್ತು ಅಂಕೋಲಾದಲ್ಲಿ ಟ್ರಕ್ ಟರ್ಮಿನಲ್ ಮಾದರಿಯಲ್ಲಿ ವಾಹನಗಳ ನಿಲುಗಡೆಗೆ ಈಗಾಗಲೇ ಜಾಗ ಗುರುತಿಸಿ ಹಸ್ತಾಂತರಿಸಲಾಗಿದೆ. ಇಲ್ಲಿ ವಾಹನ ಚಾಲಕರ ವಿಶ್ರಾಂತಿ ಹಾಗೂ ವಾಹನ ನಿಲುಗಡೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ತಿಳಿಸಿದರು.
ಅಂಕೋಲಾ–ಯಲ್ಲಾಪುರ ರಸ್ತೆಗೆ ಸುರಕ್ಷತಾ ಕ್ರಮ
ಅಂಕೋಲಾ–ಯಲ್ಲಾಪುರ ರಸ್ತೆಯಲ್ಲಿ ಬೀದಿ ದೀಪಗಳ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೂಚನಾ ಫಲಕಗಳು, ಕ್ಯಾಟ್ ಐಗಳು, ಮಿನುಗುವ ದೀಪಗಳು, ವೇಗಮಿತಿ ಫಲಕ ಹಾಗೂ ತಿರುವುಗಳಲ್ಲಿ ಕಾಣುವಿಕೆ ಹೆಚ್ಚಿಸುವ ಕನ್ನಡಿಗಳನ್ನು ಅಳವಡಿಸಬೇಕು. ರಸ್ತೆ ಮೇಲೆ ಅಡ್ಡಲಾಗಿರುವ ಮರದ ಕೊಂಬೆಗಳನ್ನು ಅರಣ್ಯ ಮತ್ತು ಪೊಲೀಸ್ ಇಲಾಖೆ ಸಹಕಾರದೊಂದಿಗೆ ತೆರವುಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಅರೆಬೈಲ್ ಘಾಟ್‌ನಲ್ಲಿ ಅಳವಡಿಸಿರುವ ಅಪಘಾತ ತಡೆ ರಕ್ಷಣಾ ಕಂಬಗಳು ರಾತ್ರಿ ವೇಳೆ ಸ್ಪಷ್ಟವಾಗಿ ಗೋಚರಿಸುವಂತೆ ರೇಡಿಯಂ ಅಳವಡಿಸಬೇಕು. ಶಿರಸಿ–ಕುಮಟಾ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಓವರ್‌ಲೋಡ್ ವಾಹನಗಳ ವಿರುದ್ಧ ಕ್ರಮ
ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿಯಮಿತ ತಪಾಸಣೆ ನಡೆಸಿ, ನಿಗದಿತ ಮಿತಿಗಿಂತ ಹೆಚ್ಚಿನ ಸರಕು ಸಾಗಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಎಲ್ಲ ತಾಲೂಕುಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಹೊಸದಾಗಿ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಿರುವವರಿಗೆ ಚಾಲನಾ ಪ್ರಮಾಣಪತ್ರ ವಿತರಿಸುವುದರ ಜತೆಗೆ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಕಳೆದ ತಿಂಗಳು ಕದ್ರಾ ರಸ್ತೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸರಕು ಸಾಗಿಸುತ್ತಿದ್ದ 13 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಸದ್ಯ ಈ ರಸ್ತೆಯಲ್ಲಿ ಓವರ್‌ಲೋಡ್ ವಾಹನಗಳು ಕಂಡುಬರುತ್ತಿಲ್ಲ. ಆದರೂ ನಿರಂತರ ತಪಾಸಣೆ ನಡೆಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯವಿರುವೆಡೆ ಎ.ಎನ್.ಪಿ.ಆರ್ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವುದರ ಜತೆಗೆ ವೇಗಮಿತಿ ಫಲಕಗಳು ಹಾಗೂ ಮಿನುಗುವ ದೀಪಗಳನ್ನು ಅಳವಡಿಸಬೇಕು. ಹೆದ್ದಾರಿಗಳಲ್ಲಿ ಕಂಡುಬರುವ ಬೀಡಾಡಿ ದನಗಳ ನಿಯಂತ್ರಣಕ್ಕೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
What do you feel about this post?
Like
Love
Happy
Haha
Sad





