ಮಂಗಳೂರು: ಸಣ್ಣ ಉದ್ಯಮ ಕನಸಿನೊಂದಿಗೆ ಆರಂಭವಾದ ಪ್ರಯತ್ನವನ್ನು ನಿರಂತರ ಪರಿಶ್ರಮ, ದೂರದೃಷ್ಟಿ ಹಾಗೂ ಸಾಮಾಜಿಕ ಬದ್ಧತೆಯೊಂದಿಗೆ ಬೆಳೆಸಿದ ತುಂಬೆ ಗ್ರೂಪ್, ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಸಂಸ್ಥೆಯ ಮುಂದಿನ ಬೆಳವಣಿಗೆಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತುಂಬೆ ಗ್ರೂಪ್ ಸಂಸ್ಥಾಪಕ ಡಾ.ತುಂಬೆ ಮೊಯ್ದೀನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮನಬಿಚ್ಚಿ ಮಾತನಾಡಿದರು.
ಮಂಗಳೂರಿನ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಯುವಕನಾಗಿ ಉದ್ಯಮ ಕ್ಷೇತ್ರದ ಕನಸು ಕಂಡಿದ್ದೆ. ಮೂರು ದಶಕಗಳ ಹಿಂದೆ ಗಲ್ಫ್‌ಗೆ ತೆರಳಿ ತಮ್ಮ ಉದ್ಯಮ ಪಯಣ ಆರಂಭಿಸಿದ್ದೆ. ಗುರಿ, ದೃಢ ಬದ್ಧತೆ ಹಾಗೂ ನಿರಂತರ ಪರಿಶ್ರಮದ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದೇನೆ ಎಂದರು.
ತುಂಬೆ ಗ್ರೂಪ್ ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದೆ. ಸಂಸ್ಥೆಯ ಬೆಳವಣಿಗೆಯ ಜತೆಗೆ ಉದ್ಯೋಗ ಸೃಷ್ಟಿ ಹಾಗೂ ಸಮಾಜಮುಖಿ ಕಾರ್ಯಗಳಿಗೂ ಆದ್ಯತೆ ನೀಡಲಾಗಿದೆ ಎಂದರು.
ನಾವೀನ್ಯತೆ, ಸ್ವತಂತ್ರ ಚಿಂತನೆ ಹಾಗೂ ದೃಢ ಬದ್ಧತೆಯಿಂದ ಕೆಲಸ ಮಾಡುವುದೇ ಯಶಸ್ಸಿನ ಪ್ರಮುಖ ಕಾರಣ. ಉದ್ಯಮ ಕ್ಷೇತ್ರದಲ್ಲಿ ಸವಾಲುಗಳು ಎದುರಾದಾಗ ಅವುಗಳಿಂದ ಹಿಂದೆ ಸರಿಯದೆ, ಹೊಸ ಅವಕಾಶಗಳನ್ನು ಹುಡುಕಿಕೊಂಡು ಮುನ್ನಡೆಯಬೇಕು ಎಂಬುದು ತಮ್ಮ ಅನುಭವ ಎಂದು ಡಾ. ತುಂಬೆ ಮೊಯ್ದೀನ್ ತಿಳಿಸಿದರು.
ತುಂಬೆ ಗ್ರೂಪ್ 30 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಭವಿಷ್ಯದ ಯೋಜನೆಗಳ ಕುರಿತು ಕನಸು ಇವೆ. ಗಲ್ಫ್ ಮೆಡಿಕಲ್ ಎಮಿರೇಟ್ಸ್‌ನಲ್ಲಿ ಪ್ರಸ್ತುತ ಏಳು ಕ್ಲಿನಿಕ್‌ಗಳಿದ್ದು, ಮುಂದಿನ ಮೂರು ವರ್ಷಗಳಲ್ಲಿ ಅವುಗಳ ಸಂಖ್ಯೆ 15ಕ್ಕೆ ಹೆಚ್ಚಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಸುಮಾರು ನಾಲ್ಕು ಸಾವಿರ ಸಿಬ್ಬಂದಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತುಂಬೆ ಮೆಡಿಸಿಟಿ ಮೂಲಕ ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶವಿದೆ. ಮಂಗಳೂರಿನಲ್ಲೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಉದ್ಯಮ ಬೆಳೆಯುವುದರ ಜತೆಗೆ ಸಮಾಜಕ್ಕೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಮುಖ್ಯ. ಯುವಕರಿಗೆ ಸೂಕ್ತ ಅವಕಾಶ ದೊರೆತಾಗ ಅವರ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತುಂಬೆ ಗ್ರೂಪ್ ಹಲವು ಯೋಜನೆಗಳನ್ನು ರೂಪಿಸಿದೆ ಎಂದರು.
1998ರಲ್ಲಿ ಆರಂಭವಾದ ಗಲ್ಫ್ ಮೆಡಿಕಲ್ ಕಾಲೇಜಿನಿಂದ ಮುಂದುವರಿದ ತುಂಬೆ ಗ್ರೂಪ್‌ನ ಪಯಣ ಇಂದು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿದೆ. ಆರೋಗ್ಯ ಸೇವೆಯ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಸಂಸ್ಥೆ ಗಮನಾರ್ಹ ಕಾರ್ಯನಿರ್ವಹಿಸುತ್ತಿದೆ.ಉದ್ಯಮ ಕ್ಷೇತ್ರದಲ್ಲಿ ನಾವೀನ್ಯತೆ, ಮೊದಲ ಬಾರಿಗೆ ಸವಾಲುಗಳನ್ನು ಎದುರಿಸುವ ಧೈರ್ಯ ಹಾಗೂ ನಿರಂತರ ಪರಿಶ್ರಮದಿಂದಲೇ ತಮ್ಮ ಸಂಸ್ಥೆ ಈ ಹಂತಕ್ಕೆ ಬೆಳೆದಿದೆ. ಆರಂಭಿಕ ದಿನಗಳಲ್ಲಿ ಹಲವು ಸವಾಲುಗಳಿದ್ದರೂ ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡು ಮುನ್ನಡೆದಿರುವುದಾಗಿ ಎಂದು ತಿಳಿಸಿದರು.
ಸಂಸ್ಥೆಯ ಬೆಳವಣಿಗೆಯ ಜತೆಗೆ ಸಮಾಜದ ಅಭಿವೃದ್ಧಿಗೂ ಕೊಡುಗೆ ನೀಡುವುದು ತಮ್ಮ ಪ್ರಮುಖ ಆಶಯ. ಮುಂದಿನ ದಿನಗಳಲ್ಲಿಯೂ ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
What do you feel about this post?
Like
Love
Happy
Haha
Sad





