ಕಾರವಾರ: ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳ ನಡುವಿನ ದರದ ಗೊಂದಲಕ್ಕೆ ಸಂಧಾನದ ಮೂಲಕ ತೆರೆ ಬಿದ್ದಿದ್ದು, ಜಿಲ್ಲೆಯಲ್ಲಿ ಇಂದಿನಿಂದ ಸಕ್ಕರೆ ಕಾರ್ಖಾನೆ ಆರಂಭಿಸಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ಕಾರ್ಯ ನಿಮಿತ್ತ ಹಳಿಯಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಬ್ಬು ಬೆಳೆಗಾರರು, ರೈತ ಸಂಘಟನೆಗಳ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಈ ಮಾಹಿತಿ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ನಡುವೆ ನಡೆದ ಸಭೆಯಲ್ಲಿ ಒಪ್ಪಿಕೊಂಡ ನಿರ್ಧಾರದಂತೆ, ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ₹3,500 ದರದಲ್ಲಿ ಖರೀದಿಸಲಾಗುವುದು ಎಂದು ಇ.ಐ.ಡಿ. ಪ್ಯಾರೀ (ಇಂಡಿಯಾ) ಲಿಮಿಟೆಡ್ ಕಾರ್ಖಾನೆಯ ಅಧಿಕಾರಿಗಳು ತಿಳಿಸಿದರು. ಶೇ 12ರಷ್ಟು ಸಕ್ಕರೆ ಇಳುವರಿ ಇರುವ ಕಬ್ಬಿಗೆ ರಾಜ್ಯದ ಯಾವುದೇ ಕಾರ್ಖಾನೆ ನಮ್ಮ ಕಾರ್ಖಾನೆಗಿಂತ ಹೆಚ್ಚಿನ ದರ ನೀಡಿದರೆ, ಅದೇ ದರವನ್ನು ಇಲ್ಲಿಯೂ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಬ್ಬಿನ ತೂಕದಲ್ಲಿ ವ್ಯತ್ಯಾಸವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಈ ಹಿಂದೆ ರಚಿಸಿರುವ ರೈತರು ಮತ್ತು ಅಧಿಕಾರಿಗಳ ಸಮಿತಿ ತೂಕ ಪ್ರಕ್ರಿಯೆಯ ಮೇಲೆ ನಿಗಾ ಇರಿಸಲಿದೆ. ತೂಕದಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ದೂರುಗಳು ಸಲ್ಲಿಕೆಯಾದರೆ ಜಿಲ್ಲಾಡಳಿತದಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಈ ಬಾರಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸುಟ್ಟ ಕಬ್ಬಿಗೆ ಶೇ 25ರಷ್ಟು ಹಣ ಕಡಿತಗೊಳಿಸುವ ಕ್ರಮವನ್ನು ಕೈಬಿಡಲಾಗಿದೆ. ಸುಟ್ಟ ಕಬ್ಬಿಗೂ ಪೂರ್ಣ ಪ್ರಮಾಣದ ಹಣ ಪಾವತಿಸಲಾಗುವುದು ಎಂದು ಕಾರ್ಖಾನೆ ಅಧಿಕಾರಿಗಳು ತಿಳಿಸಿದರು.
ಇದಲ್ಲದೆ, ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಸ್ಥಳೀಯ ರಸ್ತೆ ದುರಸ್ತಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಮೂರು ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ವಿವಿಧ ಇಲಾಖೆಗಳ ಅಧಿಕಾರಿಗಳು, ಕಬ್ಬು ಬೆಳೆಗಾರರು ಹಾಗೂ ರೈತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.



