ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಜುಲೈ 6, 2024 ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರದ ಚುಕ್ಕಾಣೆ ಹಿಡಿದಿದ್ದ ಐಎಎಸ್ ಅಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅವರ ದೀರ್ಘಕಾಲದ ಜಿಲ್ಲೆಯ ಒಡನಾಟದ ಕೊಂಡಿ ವರ್ಗಾವಣೆ ಮೂಲಕ ಕಳಚಿದೆ.
ಲಕ್ಷ್ಮಿಪ್ರೀಯಾ ಅವರು ಉತ್ತರ ಕನ್ನಡ ಜಿಲ್ಲೆಗೆ ಸಂಕಷ್ಟದ ಕಾಲದಲ್ಲಿ ಅಧಿಕಾರ ಸ್ವೀಕರಿಸಿ ತಮ್ಮದೇ ಆಡಳಿತ ಶೈಲಿಯ ಮೂಲಕ ಜಿಲ್ಲೆಯ ಆಡಳಿತ ನಡೆಸಿದ್ದರು. ಜಿಲ್ಲೆಯಲ್ಲಿ ದೀರ್ಘಕಾಲ ಅಧಿಕಾರ ನಡೆಸಿರುವ ಅವರು ಯಾವುದೇ ವಿವಾದಗಳಿಲ್ಲದೇ ಅಧಿಕಾರ ನಡೆಸಿರುವುದು ಅವರ ಜನಮನ್ನಣೆಗೆ ಕಾರಣವಾಗಿದೆ. ಜಿಲ್ಲೆಯ ಅಧಿಕಾರಿಗಳು ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಸ್ಮರಿಸುತ್ತಾರೆ.
ಲಕ್ಷ್ಮಿಪ್ರೀಯಾ ಅವರು ಅಧಿಕಾರ ಹಿಡಿದ ಕೆಲ ದಿನಗಳಲ್ಲಿ ಎದುರಾದ ಸಾಕಷ್ಟು ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡು ಅವುಗಳನ್ನು ಎದುರಿಸಿ ಸಮರ್ಥವಾಗಿ ಆಡಳಿತ ನಡೆಸಿದ ಅಧಿಕಾರಿ. ಜಿಲ್ಲೆಯಲ್ಲಿ ಸುರಿದ ರಣಮಳೆಗೆ ಇಡೀ ಜಿಲ್ಲೆಯೇ ತತ್ತರಿಸಿಹೋಗಿತ್ತು. ಇಂತಹ ಸಮಯದಲ್ಲಿ ತಮ್ಮದೇ ಚಾಕಚಕ್ಯತೆಯ ಆಡಳಿತ ಶೈಲಿ ಮೂಲಕ ಅವುಗಳನ್ನು ನಿವಾರಣೆ ಮಾಡುವ ಮೂಲಕ ಸುಲಲಿತ ಅಧಿಕಾರ ನಡೆಸಿದ್ದರು. ಜಿಲ್ಲೆಯಲ್ಲಿ ಆಯಾಕಟ್ಟಿನ ಅಧಿಕಾರಿಗಳಿಗೆ ಅವರದೇ ಶೈಲಿಯಲ್ಲಿ ಜವಾಬ್ದಾರಿಗಳನ್ನು ವಹಿಸುವ ಮೂಲಕ ಸಮಸ್ಯೆಗಳನ್ನು ತ್ವರಿತ ರೀತಿಯಲ್ಲಿ ಬಗೆಹರಿಸುವ ಆಡಳಿತ ವೈಖರಿಗೆ ಸಾಕ್ಷಿ ಆಗಿದ್ದರು.
ಕೆ. ಲಕ್ಷ್ಮಿಪ್ರಿಯಾ ಅವರನ್ನು ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರಾಗಿ (ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಮತ್ತು ಸಮನ್ವಯ) ನೇಮಕ ಮಾಡಲಾಗಿದೆ. ಈ ಹುದ್ದೆಗೆ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಯೋಜನೆ ಮಾಡಲಾಗಿದೆ ಎಂದು ಸರಕಾರದ ಆದೇಶದಲ್ಲಿ ತಿಳಿಸಿದೆ.



