ಮಂಗಳೂರು: ದೇಶದ 22 ಪದವಿಪೂರ್ವ ಕಾಲೇಜುಗಳ 252 ವಿದ್ಯಾರ್ಥಿಗಳು ಭಾಗವಹಿಸಿದ್ದ ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿದೆ.
ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ನಡೆದ ‘ಸಹ್ಯಾದ್ರಿ ವಿಜ್ಕ್ವಿಜ್ ಜೂನಿಯರ್ಸ್–2026’ರ ಗ್ರ್ಯಾಂಡ್ ಫಿನಾಲೆಯಲ್ಲಿ ಶಾರದಾ ಕಾಲೇಜಿನ ವಿಕ್ರಮ್ ಶೈಲೇಶ ನಾಯಕ್, ಪೃಥ್ವಿಶ್ ಗಟ್ಟಿ ಕೆ. ಮತ್ತು ಚಿನ್ಮಯ್ ಎನ್. ಶೆಟ್ಟಿ ಅವರ ತಂಡ ಈ ಸಾಧನೆ ಮಾಡಿದೆ.
ಪ್ರೆಸಿಡೆನ್ಸಿ ಸಿಬಿಎಸ್ಇ ಶಾಲೆಯ ರತನ್, ಪವನ್ ಮತ್ತು ಸಯ್ಯಾದ್ ರಶ್ದಾನ್ ಅವರ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ಶಾರದಾ ಪದವಿಪೂರ್ವ ಕಾಲೇಜಿನ ಗಣೇಶ್ರಾಜ್ ಕೆ.ಎಂ., ಸೋಹನ್ ಬಾಳಿಗ ಬಿ. ಮತ್ತು ಸಂಚಯ್ ಪಿ. ಶೆಟ್ಟಿ ಅವರ ತಂಡ ತೃತೀಯ ಸ್ಥಾನ ಪಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಸ್. ಇಂಜಗನೇರಿ, ಭಂಡಾರಿ ಫೌಂಡೇಶನ್ನ ಟ್ರಸ್ಟಿ ದೇವದಾಸ್ ಹೆಗ್ಡೆ ಹಾಗೂ ಎಂಬಿಎ ಕಾರ್ಯಕ್ರಮದ ನಿರ್ದೇಶಕ ಡಾ. ವಿಶಾಲ್ ಸಮರ್ಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ. ವಿಶಾಲ್ ಸಮರ್ಥ್ ಸ್ವಾಗತಿಸಿದರು. ಗಣ್ಯರು ದೀಪ ಬೆಳಗಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ವಿದ್ಯಾರ್ಥಿ ಪ್ರತಿನಿಧಿಗಳು ವಿಜೇತರಿಗೆ ನೀಡುವ ಟ್ರೋಫಿಗಳನ್ನು ಅನಾವರಣಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಎಸ್. ಇಂಜಗನೇರಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಆಸಕ್ತಿ ಬೆಳೆಸಿಕೊಳ್ಳಬೇಕು. ಹೊಸ ವಿಷಯಗಳನ್ನು ಕುತೂಹಲದಿಂದ ಕಲಿಯುವ ಮನೋಭಾವ ಬೆಳೆಸಿಕೊಂಡು ಶೈಕ್ಷಣಿಕ ಉತ್ಕೃಷ್ಟತೆ ಸಾಧಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ರಸಪ್ರಶ್ನೆ ನಿರೂಪಕ ರಕ್ಷಿತ್ ಶೆಟ್ಟಿ ಸ್ಪರ್ಧೆಯನ್ನು ನಡೆಸಿಕೊಟ್ಟರು. ತಮ್ಮ ಆಕರ್ಷಕ ನಿರೂಪಣೆಯ ಮೂಲಕ ಸ್ಪರ್ಧಿಗಳು ಮತ್ತು ಪ್ರೇಕ್ಷಕರಲ್ಲಿ ಕೊನೆಯವರೆಗೂ ಉತ್ಸಾಹ ಮೂಡಿಸಿದರು. ವಿದ್ಯಾರ್ಥಿ ಸಂಯೋಜಕಿ ಶ್ರೀನಿಧಿ ಶೆಟ್ಟಿ ವಂದಿಸಿದರು.
ರಾಷ್ಟ್ರಮಟ್ಟದ ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ, ಬೌದ್ಧಿಕ ಸಾಮರ್ಥ್ಯ, ತಂಡದ ಸಹಕಾರ ಮತ್ತು ಸ್ಪರ್ಧಾತ್ಮಕ ಮನೋಭಾವ ಪ್ರದರ್ಶಿಸಲು ವೇದಿಕೆಯಾಯಿತು. ಜ್ಞಾನಾರ್ಜನೆ ಹಾಗೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮ ಸಂಭ್ರಮದಿಂದ ಮುಕ್ತಾಯಗೊಂಡಿತು.





