ಮಂಗಳೂರು: ಕರಾವಳಿ ಕರ್ನಾಟಕ ಮತ್ತು ರಾಜ್ಯದ ರಾಜಧಾನಿ ನಡುವಿನ ರೈಲು ಸಂಪರ್ಕಕ್ಕೆ ಹೊಸ ವೇಗ ದೊರೆತಿದೆ. ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ಮೊತ್ತ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ, ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲಿಗೆ ಹಸಿರು ನಿಶಾನೆ ತೋರಿಸಿದರು. ಹಸಿರು ನಿಶಾನೆ ದೊರೆಯುತ್ತಿದ್ದಂತೆಯೇ ರೈಲು ಬೆಂಗಳೂರಿನತ್ತ ತನ್ನ ಮೊದಲ ಸಂಚಾರವನ್ನು ಆರಂಭಿಸಿತು.
ಮಂಗಳೂರು ಮತ್ತು ಬೆಂಗಳೂರು ನಡುವಿನ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುವ ಉದ್ದೇಶದಿಂದ ಈ ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸಲಾಗಿದೆ. ಸ್ಮಾರ್ಟ್ ಸಿಟಿ ಮಂಗಳೂರನ್ನು ರಾಜ್ಯದ ರಾಜಧಾನಿಯೊಂದಿಗೆ ನೇರವಾಗಿ ಸಂಪರ್ಕಿಸುವ ಈ ರೈಲು ಪ್ರಯಾಣದ ಅವಧಿಯನ್ನು ಕಡಿತಗೊಳಿಸುವುದರ ಜತೆಗೆ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳಿರುವ ವೇಗದ ಪ್ರಯಾಣದ ಅನುಭವ ಒದಗಿಸಲಿದೆ ಎಂದರು.
ವಂದೇ ಭಾರತ್ ರೈಲು ಸೇವೆಯ ಆರಂಭದಿಂದ ಕರಾವಳಿ ಭಾಗದ ಜನರಿಗೆ ರಾಜಧಾನಿಗೆ ತೆರಳಲು ಮತ್ತೊಂದು ಉತ್ತಮ ಪ್ರಯಾಣದ ಆಯ್ಕೆ ದೊರೆತಂತಾಗಿದೆ. ಉದ್ಯೋಗ, ಶಿಕ್ಷಣ, ವ್ಯಾಪಾರ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಮಂಗಳೂರು–ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ಸೇವೆ ಅನುಕೂಲವಾಗುವ ನಿರೀಕ್ಷೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ರಾಜೇಶ್ ನಾಯ್ಕ್, ಡಾ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಇದ್ದರು.





