ಬೆಲೆ ಏರಿಕೆ, ಆಡಳಿತ ವೈಫಲ್ಯದ ವಿರುದ್ಧ ಸುರತ್ಕಲ್‌ನಲ್ಲಿ ಬಿಜೆಪಿ ಜನಾಂದೋಲನ: ವಿರೋಧ ಪಕ್ಷದ ನಾಯಕ ಆರ್ ಅಶೋಕ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜಕೀಯ ರಾಜ್ಯ ಶಿರಸಿ

Spread the love

ಸುರತ್ಕಲ್: ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೆರವಾಗಬೇಕಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಅದೇ ಯೋಜನೆಗಳ ಹೆಸರಿನಲ್ಲಿ ಜನರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡುವ ಸ್ಥಿತಿಗೆ ತಲುಪಿದೆ. ಆಡಳಿತ ವೈಫಲ್ಯದಿಂದ ರಾಜ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೆಲೆ ಏರಿಕೆ ಮತ್ತು ತೆರಿಗೆ ಹೆಚ್ಚಳದ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಸುರತ್ಕಲ್‌ನಲ್ಲಿ ನಡೆದ ‘ಜನಾಂದೋಲನ–ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ದರ ಏರಿಕೆ ಮತ್ತು ತೆರಿಗೆ ಹೆಚ್ಚಳದ ಮೂಲಕ ಜನರನ್ನು ಸುಲಿಗೆ ಮಾಡುತ್ತಿದೆ. ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಆಡಳಿತಾವಧಿ ಇನ್ನು ಒಂದು ವರ್ಷ ಮಾತ್ರ ಉಳಿದಿದ್ದು, ಜನರು ಬದಲಾವಣೆ ಬಯಸುತ್ತಿದ್ದಾರೆ. ಉಳಿದ ಅವಧಿಯಲ್ಲಾದರೂ ಜನರಿಗೆ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಒಂದೆಡೆ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ಹಿಂದೂ ಸಮಾಜ ಗೌರವಿಸುವ ಗೋವುಗಳ ರಕ್ಷಣೆಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಠಿಣ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಸರ್ಕಾರ ಮುಂದಾಗಿದೆ. ಮತಾಂತರ ನಿಷೇಧ ಕಾಯ್ದೆಯನ್ನೂ ವಾಪಸ್ ಪಡೆಯುವ ಪ್ರಯತ್ನ ನಡೆಯುತ್ತಿದೆ. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವ ಬದಲು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಬದಿಗೊತ್ತಿ ಗೂಂಡಾಗಿರಿ ಹಾಗೂ ಕೊತ್ವಾಲ್ ಮಾದರಿಯ ಆಡಳಿತ ನಡೆಸಲಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಡಳಿತ ವೈಖರಿ ಇದೇ ರೀತಿಯಾಗಿದೆ ಎಂದು ಟೀಕಿಸಿದ ಅಶೋಕ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿ ಬಲಿಷ್ಠವಾಗಿ ಆಡಳಿತ ನಡೆಸುತ್ತಿದ್ದರೂ, ಸ್ಟಿಂಗ್ ಆಪರೇಷನ್ ಮೂಲಕ ಅವರ ಧ್ವನಿ ಅಡಗಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಬಳಿಕ ಉಪರಾಷ್ಟ್ರಪತಿಗಳು, ನ್ಯಾಯಾಧೀಶರು ಹಾಗೂ ಗಣ್ಯರ ಸಮ್ಮುಖದಲ್ಲಿ ಕುಟುಂಬದ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸುತ್ತಿದ್ದಾರೆ. ಇಂತಹವರು ರಾಷ್ಟ್ರೀಯ ಪಕ್ಷದ ವಿರೋಧ ಪಕ್ಷದ ನಾಯಕರಾಗಿ ಮುಂದುವರಿಯಲು ಯೋಗ್ಯರಲ್ಲ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಗುಣಕ್ಕೂ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.

ಹಕ್ಕುಪತ್ರ ನೀಡಲೂ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ: ಭರತ್ ಶೆಟ್ಟಿ

ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಬಿಜೆಪಿ ಆಡಳಿತದ ಅವಧಿಯಲ್ಲಿ ಸುಮಾರು 5 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ವಿಧವಾ ವೇತನ, ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳು ಜನರಿಗೆ ದೊರೆಯುತ್ತಿದ್ದವು. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದರು.

ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಹೊಸ ರಸ್ತೆ ನಿರ್ಮಾಣಕ್ಕೂ ಮುಂದಾಗಿಲ್ಲ. ಹಾಲಿನ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಜನರಿಗೆ ನೆಮ್ಮದಿಯ ಬದುಕು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಇದನ್ನು ಜನತೆ ಮರೆಯುವುದಿಲ್ಲ ಎಂದು ಟೀಕಿಸಿದರು.

ರಾಜ್ಯದ ಅಸ್ಮಿತೆ ಉಳಿಸಲು ಗ್ರಾಮ ಮಟ್ಟದಲ್ಲಿ ಹೋರಾಟ: ಚೌಟ

ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಕರ್ನಾಟಕದ ಗೌರವಕ್ಕೆ ಧಕ್ಕೆಯಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ದುರಾಡಳಿತದ ವಿರುದ್ಧ ಬಿಜೆಪಿ ಮತ್ತೆ ರಾಜ್ಯದ ಅಸ್ಮಿತೆ ಉಳಿಸುವ ಉದ್ದೇಶದಿಂದ ಪ್ರತಿ ಗ್ರಾಮದಲ್ಲೂ ಹೋರಾಟ ನಡೆಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ವಿಧಾನ ಪರಿಷತ್ ಸದಸ್ಯ ಬಾಲಕೃಷ್ಣ ಭಟ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ಮುನಿಸ್ವಾಮಿ, ರಾಜೇಶ್, ತಿಲಕ್ ರಾಜ್ ಕೃಷ್ಣಾಪುರ, ಕವಿತಾ ಸನಿಲ್, ಪ್ರೇಮಾನಂದ ಶೆಟ್ಟಿ, ಯತೀಶ್, ನಂದನ್ ಮಲ್ಯ, ವಿಕಾಸ್ ಪುತ್ತೂರು, ಮಂಜುಳಾ ರಾವ್, ಶ್ವೇತಾ ಕುಮಾರಿ, ಶಹನವಾಜ್ ಹುಸೈನ್, ಜೇಸಿನ್ ಡಿಸೋಜಾ, ಮಾಜಿ ಕಾರ್ಪೊರೇಟರ್‌ಗಳು, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಸ್ವಾಗತಿಸಿದರು. ಪುಷ್ಪರಾಜ್ ಮುಕ್ಕ ನಿರೂಪಿಸಿದರು. ಸಭೆಗೂ ಮುನ್ನ ಸುರತ್ಕಲ್ ಕಟ್ಲದಿಂದ ಜಂಕ್ಷನ್‌ವರೆಗೆ ಪಾದಯಾತ್ರೆ ನಡೆಯಿತು.

Leave a Reply

Your email address will not be published. Required fields are marked *