ಮಂಗಳೂರು: ಕರಾವಳಿಯ ವಾಣಿಜ್ಯ ಬೆಳೆ ಗೇರು ಬೆಳೆಯ ಮಹತ್ವದ ಕುರಿತು ಬೆಳೆಗಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಿಟ್ಟಿನಲ್ಲಿ ಗೇರು ಮೇಳ ಪ್ರಮುಖ ಹೆಜ್ಜೆಯಾಗಿದೆ ಎಂದು ಸ್ಪೀಕರ್ ಯು. ಟಿ. ಖಾದರ್ ಅವರು ಹೇಳಿದರು.
ಶನಿವಾರ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಹಾಗೂ ರಾಜ್ಯ ಅರಣ್ಯ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗೇರು ಮೇಳದ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರಾವಳಿಯಲ್ಲಿ ಗೇರು ಉದ್ಯಮ ಸಾಕಷ್ಟು ಕುಟುಂಬಕ್ಕೆ ಆಧಾರ ಆಗಿತ್ತು. ಬೆಳೆ ಕುಂಠಿತ ಆದ ಕಾರಣ ದಕ್ಷಿಣ ಆಫ್ರೀಕಾದಿಂದ ಕಚ್ಚಾ ಗೇರು ಇಲ್ಲಿನ ಕಾರ್ಖಾನೆಗಳಿಗೆ ಆಮದು ಆಗುತ್ತಿದೆ. ಸಂಸ್ಕರಿತ ಗೇರು ಉತ್ಪನ್ನ ವಿದೇಶಕ್ಕೆ ರಫ್ತು ಆಗುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಇಳುವರಿ ನೀಡುವ ಗೇರು ತೋಟಗಳ ಕೃಷಿ ಮತ್ತು ಹೆಚ್ಚಿನ ಉತ್ಪಾದಕತೆ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಲಾಭಕ್ಕಾಗಿ ಅದರ ಪ್ರಯೋಜನಗಳ ಬಗ್ಗೆ ಸಾಮಾನ್ಯ ಜನರಿಗೆ ಮತ್ತು ರೈತರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗೇರು ಮೇಳವನ್ನು ನಿಗಮದಿಂದ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು ಮಾತನಾಡಿ, ರಾಜ್ಯ ಮಟ್ಟದ ಗೇರು ಮೇಳ ಮತ್ತು ಕಾರ್ಯಾಗಾರ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಇದೇ 17, 18 ರಂದು ನಗರದ ಕದ್ರಿ ಪಾರ್ಕ್ ನಲ್ಲಿ ನಡೆಯಲಿದೆ. ಈ ಮೇಳದಲ್ಲಿ ಹೆಚ್ಚಿನ ಇಳುವರಿ ನೀಡುವ ಗೇರು ತೋಟಗಳ ಕೃಷಿ ಮತ್ತು ಹೆಚ್ಚಿನ ಉತ್ಪಾದಕತೆ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಲಾಭಕ್ಕಾಗಿ ಅದರ ಪ್ರಯೋಜನಗಳ ಬಗ್ಗೆ ಸಾಮಾನ್ಯ ಜನರಿಗೆ ಮತ್ತು ರೈತರಿಗೆ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ರೈತರು ಮನೆಗೆ ಹೋಗುವಾಗ ಹೊಸ ಜ್ಞಾನ, ಸುಧಾರಿತ ತಳಿಯ ಸಸಿಗಳು ಮತ್ತು ಮಾರುಕಟ್ಟೆಯ ಭರವಸೆಯೊಂದಿಗೆ ಹೋಗುವಂತಿರಬೇಕು ಎಂಬ ಉದ್ದೇಶದೊಂದಿಗೆ ಈ ಮೇಳ ಉಚಿತ ಪ್ರವೇಶದೊಂದಿಗೆ ಜನರಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಗೇರು ಬೀಜ ಮತ್ತು ಹಣ್ಣಿನ ಉಪಯೋಗದ ಬಗ್ಗೆ ಮತ್ತು ಗೇರು ಬೆಳೆ ಮತ್ತು ಅದರ ಇಳುವರಿ ಪ್ರಾಮುಖ್ಯತೆ,ಗೇರು ಬೆಳೆಯ ಸಾಂಸ್ಕೃತಿಕ ಆಚರಣೆಗಳ ಪ್ಯಾಕೇಜ್
ವಿವಿಧ ಬಗೆಯ ಗೇರು ಗಿಡಗಳ ಪ್ರದರ್ಶನ ಗೇರು ಹಣ್ಣಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ,ಗೇರು ಉತ್ಪಾದನೆಯ ಪ್ರಸ್ತುತ ಸನ್ನಿವೇಶದ ಬಗ್ಗೆ ಕಾರ್ಯಾಗಾರ ಸಸಿ ವಿತರಣೆ, ಮೌಲ್ಯವರ್ಧನೆ ಕಾರ್ಯಾಗಾರ, ಗೇರು ಹಣ್ಣಿನಿಂದ ರಸ, ಜ್ಯಾಮ್ ಮತ್ತು ಇತರ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ. ಪ್ರಗತಿಪರ ರೈತರಿಗೆ ಸನ್ಮಾನ, ಖರೀದಿದಾರ- ಮಾರಾಟಗಾರರ ಸಮಾವೇಶ ನಡೆಯಲಿದೆ. ಗೇರು ಕೃಷಿಕರು ಹಾಗೂ ಸ್ವಸಹಾಯ ಗುಂಪುಗಳ ಮಳಿಗೆ, ಗೋಡಂಬಿ ಪ್ರದರ್ಶನ ಇರಲಿದೆ ಎಂದರು.
ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲ ಕರಿಕಾಲನ್ ಮಾತನಾಡಿ, ಮನೆಗೊಂದು ಗೇರು ಗಿಡ ಬೆಳೆಸುವ ಯೋಜನೆ ನಿಗಮ ಹೊಂದಿದೆ ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ರವಿಶಂಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿ.ಕರಿಕಾಲನ್ ಇದ್ದರು.




