ಮೂಳೆ ಇಂಪ್ಲಾಂಟ್‌ಗೆ ಎನ್‌ಐಟಿಕೆ ಸಂಶೋಧಕರಿಂದ ಹೊಸ ಲೇಪನ ತಂತ್ರಜ್ಞಾನ, ಮೇಕ್ ಇನ್ ಇಂಡಿಯಾ ಪೇಟೆಂಟ್ ಮಾನ್ಯತೆ ಗರಿ

ಜಿಲ್ಲಾ ಸುದ್ದಿ ಆರೋಗ್ಯ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ

Spread the love

ಸುರತ್ಕಲ್: ಇಲ್ಲಿನ ಸುರತ್ಕಲ್‌ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ) ಸಂಶೋಧಕರು ಮೂಳೆ ಇಂಪ್ಲಾಂಟ್‌ಗಳಿಗಾಗಿ ಜೈವಿಕ ಸಕ್ರಿಯ, ಬಾಳಿಕೆ ಬರುವ ಹಾಗೂ ಆಂಟಿಮೈಕ್ರೊಬಿಯಲ್ ಗುಣ ಲಕ್ಷಣ ಹೊಂದಿರುವ ಸುಧಾರಿತ ಲೇಪನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಸೊಂಟ ಹಾಗೂ ಮೊಣಕಾಲು ಕೀಲು ಬದಲಿ ಮಾಡುವಲ್ಲಿ ಬಳಸಬಹುದಾದ ಈ ತಂತ್ರಜ್ಞಾನಕ್ಕೆ ಪೇಟೆಂಟ್ ದೊರೆತಿದ್ದು, ಸ್ಥಳೀಯ ಬಯೋಮೆಡಿಕಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ.

ಇಂಪ್ಲಾಂಟ್‌ಗೆ ಸಂಬಂಧಿಸಿದ ಸೋಂಕು, ಇಂಪ್ಲಾಂಟ್ ಸಡಿಲಗೊಳ್ಳುವಿಕೆ ಹಾಗೂ ದೀರ್ಘಕಾಲೀನ ಕಾರ್ಯಕ್ಷಮತೆಯ ಸವಾಲುಗಳನ್ನು ಮನಗಂಡು ಸಂಶೋಧನಾ ತಂಡ ಈ ಲೇಪನ ತಂತ್ರಜ್ಞಾನವನ್ನು ರೂಪಿಸಿದೆ. ಹೈ ವೆಲಾಸಿಟಿ ಆಕ್ಸಿ-ಇಂಧನ ಥರ್ಮಲ್ ಸ್ಪ್ರೇ ತಂತ್ರಜ್ಞಾನ ಬಳಸಿ ಇಂಪ್ಲಾಂಟ್ ಮೇಲ್ಮೈಗೆ ನೇರವಾಗಿ ಲೇಪನ ಹಚ್ಚಬಹುದಾಗಿದೆ.

ಈ ಲೇಪನವು ಇಂಪ್ಲಾಂಟ್‌ ಯಾಂತ್ರಿಕ ಬಾಳಿಕೆ, ಉಡುಗೆ ಪ್ರತಿರೋಧ ಹಾಗೂ ಮೂಳೆ ಏಕೀಕರಣ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆವ ಮೂಲಕ ಶಸ್ತ್ರಚಿಕಿತ್ಸೆಯ ನಂತರದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸಂಶೋಧನಾ ತಂಡ ನಡೆಸಿದ ಪೂರ್ವಭಾವಿ ಅಧ್ಯಯನಗಳಲ್ಲಿ ಸಾಂಪ್ರದಾಯಿಕ ಇಂಪ್ಲಾಂಟ್‌ಗಳಿಗೆ ಹೋಲಿಸಿದರೆ ಉತ್ತಮ ಕಾರ್ಯಕ್ಷಮತೆ ಕಂಡು ಬಂದಿದೆ. ಪರಿಷ್ಕರಣೆ ಶಸ್ತ್ರಚಿಕಿತ್ಸೆಗಳ ಅಗತ್ಯವನ್ನು ಕಡಿಮೆ ಮಾಡುವ ಹಾಗೂ ರೋಗಿಗಳ ದೀರ್ಘಕಾಲೀನ ಆರೋಗ್ಯ ಫಲಿತಾಂಶ ಸುಧಾರಿಸುವ ಸಾಮರ್ಥ್ಯ ಈ ತಂತ್ರಜ್ಞಾನಕ್ಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಶೋಧನೆಯು ಅನೇಕ ಅಂತರರಾಷ್ಟ್ರೀಯ ಪ್ರಕಟಣೆಗಳಿಗೆ ಕಾರಣವಾಗಿದ್ದು, ತಂತ್ರಜ್ಞಾನಕ್ಕೆ ಪೇಟೆಂಟ್ ಕೂಡ ಲಭಿಸಿದೆ. ಪ್ರಸ್ತುತ ತಂತ್ರಜ್ಞಾನದ ಕ್ಲಿನಿಕಲ್ ಬಳಕೆ ಹಾಗೂ ವಾಣಿಜ್ಯೀಕರಣದ ದಿಸೆಯಲ್ಲಿ ಕಾರ್ಯ ನಡೆಯುತ್ತಿದೆ.

ಎನ್‌ಐಟಿಕೆ ಸುರತ್ಕಲ್‌ನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಧಾಕರ್ ಸಿ. ಜಂಬಗಿ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ ಡಾ. ದೀಪ್ ಶಂಕರ್ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.

‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿ ರೂಪುಗೊಂಡಿರುವ ಈ ತಂತ್ರಜ್ಞಾನವು ‘ಸ್ವಸ್ಥ ಭಾರತ್’ ಮತ್ತು ‘ವಿಕ್ಷಿತ್ ಭಾರತ್’ ಪರಿಕಲ್ಪನೆಗಳಿಗೆ ಪೂರಕವಾಗಿದ್ದು, ಸ್ಥಳೀಯ ಆರೋಗ್ಯ ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *