ಮಂಗಳೂರು: ಸಹಕಾರ ಚಳವಳಿಗೆ ಜೀವನವನ್ನೇ ಸಮರ್ಪಿಸಿದ ದಾರ್ಶನಿಕ ನಾಯಕ ಮೊಳಹಳ್ಳಿ ಶಿವರಾವ್ ಅವರ ಜೀವನ ಸಾಧನೆ, ಸಮಾಜಮುಖಿ ಚಿಂತನೆ ಹಾಗೂ ಸಹಕಾರ ಕ್ಷೇತ್ರಕ್ಕೆ ನೀಡಿದ ಅಪೂರ್ವ ಕೊಡುಗೆಯನ್ನು ದಾಖಲಿಸುವ ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು.
ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ರಚಿಸಿರುವ ಈ ಕೃತಿ ಲೋಕಾರ್ಪಣೆಗೊಂಡಿತು. ಬಳಿಕ ಮಾತನಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಸಹಕಾರ ಕ್ಷೇತ್ರದ ಬೆಳವಣಿಗೆಗಾಗಿ ಮೊಳಹಳ್ಳಿ ಶಿವರಾವ್ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ದುಡಿದ ಅಪರೂಪದ ವ್ಯಕ್ತಿತ್ವವಾಗಿದ್ದರು ಎಂದು ಸ್ಮರಿಸಿದರು.

“ನಮ್ಮ ಬ್ಯಾಂಕಿನ ಪ್ರಧಾನ ಕಚೇರಿಯ ಕಿರಿಯ ನಿರೀಕ್ಷಕರಾಗಿರುವ ಹಾಗೂ ಕಳೆದ ಸುಮಾರು 35 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕ್ರೀಡಾ ಬರಹಗಾರರಾಗಿ ಗುರುತಿಸಿಕೊಂಡಿರುವ ಜಗದೀಶ್ಚಂದ್ರ ಅಂಚನ್ ಅವರು ಈ ಕೃತಿಯನ್ನು ರಚಿಸಿದ್ದಾರೆ. ಎತ್ತಿನಗಾಡಿಯಲ್ಲಿ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿ ಸಹಕಾರದ ಸಂದೇಶ ಸಾರಿದ ಮೊಳಹಳ್ಳಿ ಶಿವರಾವ್ ಅವರು ಗ್ರಾಮೀಣ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಕುಂದಾಪುರ ತಾಲೂಕಿನ ಮೊಳಹಳ್ಳಿಯಲ್ಲಿ ಜನಿಸಿ, ಪುತ್ತೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದರೂ ಸಹಕಾರ ಚಳವಳಿಯ ವಿಸ್ತರಣೆಗೆ ತಮ್ಮ ಬದುಕನ್ನು ಸಮರ್ಪಿಸಿದ್ದರು. ಅವರ ಆದರ್ಶ ಬದುಕು ಇಂದಿನ ಪೀಳಿಗೆಗೂ ಪ್ರೇರಣೆಯಾಗಲಿ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಭಟ್, ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕ ಶಶಿಕುಮಾರ್ ರೈ ಬಾಳ್ಯೊಟ್ಟು, ನಬಾರ್ಡ್‌ನ ಸಂಗೀತ, ರಮೇಶ್, ಸುಧೀರ್ ಕುಮಾರ್ ಸೇರಿದಂತೆ ಹಲವು ಗಣ್ಯರು ಇದ್ದರು.
What do you feel about this post?
Like
Love
Happy
Haha
Sad





