ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮನೆಮನೆ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಎನ್ಯುಮರೇಷನ್ ನಮೂನೆಗಳಲ್ಲಿ ಶೇ.99.97ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದೆ. ಇದೇ ವೇಳೆ, ಒಟ್ಟು ಮತದಾರರಲ್ಲಿ ಶೇ.20.02ರಷ್ಟು ಮಂದಿ ಗೈರು, ಸ್ಥಳಾಂತರ, ಮೃತರು, ನಕಲಿ ಹಾಗೂ ಇತರೆ (ಎಎಸ್‌ಡಿಡಿಒ) ವಿಭಾಗದಲ್ಲಿ ಗುರುತಿಸಲ್ಪಟ್ಟಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂನ್ 16ರ ಅಂಕಿ-ಅಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಈ ಪೈಕಿ 1,10,97,426 ಮಂದಿ ಎಎಸ್‌ಡಿಡಿಒ ವಿಭಾಗದಲ್ಲಿ ಗುರುತಿಸಲ್ಪಟ್ಟಿದ್ದಾರೆ. ರಾಜ್ಯದಾದ್ಯಂತ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಎಲ್ಲ ಮತದಾರರಿಗೂ ಶೇ 100ರಷ್ಟು ಎನ್ಯುಮರೇಷನ್ ನಮೂನೆಗಳನ್ನು ವಿತರಿಸಿದ್ದಾರೆ. ಈ ಪೈಕಿ 4,43,17,263 (ಶೇ.79.95) ಮಂದಿ ಮಾಹಿತಿ ಭರ್ತಿ ಮಾಡಿ ಸಹಿಯೊಂದಿಗೆ ನಮೂನೆಗಳನ್ನು ಹಿಂದಿರುಗಿಸಿದ್ದಾರೆ. ಮನೆಮನೆ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ 5,54,14,689 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಕೇವಲ 17,625 ನಮೂನೆಗಳು ಮಾತ್ರ ಬಾಕಿ ಉಳಿದಿವೆ. ಜೊತೆಗೆ 6,91,174 ಮಂದಿ ಆನ್‌ಲೈನ್ ಮೂಲಕವೇ ನಮೂನೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಎಎಸ್‌ಡಿಡಿಒ ವಿಭಾಗದಲ್ಲಿ ಗುರುತಿಸಲಾದ ಮತದಾರರಲ್ಲಿ 66,62,257 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 16,27,642 ಮಂದಿ ಗೈರು, 16,31,245 ಮಂದಿ ಮೃತಪಟ್ಟವರು, 6,90,581 ಮಂದಿ ಬೇರೆಡೆ ಮತದಾರರಾಗಿ ನೋಂದಾಯಿಸಿಕೊಂಡವರು ಹಾಗೂ 4,85,701 ಮಂದಿ ಇತರೆ ವರ್ಗಕ್ಕೆ ಸೇರಿದ್ದಾರೆ ಎಂದು ಮಾಹಿತಿ ನೀಡಿದರು.
ಜೂನ್ 30ರಿಂದ ಆರಂಭವಾದ ಬಿಎಲ್‌ಒಗಳ ಮನೆಮನೆ ಸಮೀಕ್ಷೆ ಆಗಸ್ಟ್ 8ರವರೆಗೆ ನಡೆಯಲಿದ್ದು, ಈವರೆಗೆ ಹೊಸ ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ಕೈಬಿಡುವ ಸಂಬಂಧ ಒಟ್ಟು 12,20,312 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಫಾರಂ-6ರಡಿ 3,72,201, ಫಾರಂ-6ಎರಡಿ 3,207, ಫಾರಂ-7ರಡಿ 30,952 ಹಾಗೂ ಫಾರಂ-8ರಡಿ 8,13,952 ಅರ್ಜಿಗಳಿವೆ ಎಂದು ತಿಳಿಸಿದರು.
2026ರ ಅಕ್ಟೋಬರ್ 1ರ ವೇಳೆಗೆ 18 ವರ್ಷ ಪೂರ್ಣಗೊಳ್ಳುವ ಅಥವಾ ಈಗಾಗಲೇ 18 ವರ್ಷ ಪೂರೈಸಿರುವ ಅರ್ಹ ಯುವಕರು ಫಾರಂ-6 ಮತ್ತು ಘೋಷಣಾ ಪತ್ರದೊಂದಿಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
What do you feel about this post?
Like
Love
Happy
Haha
Sad





