ಮಂಗಳೂರು ಟೆಕ್ನೋವಾಂಜ್–2026’ರ 6ನೇ ಆವೃತ್ತಿಯ ಉದ್ಘಾಟನೆ: ಕರಾವಳಿಯಲ್ಲಿ ಐಟಿ–ಬಿಟಿ ಹೂಡಿಕೆಗೆ  ವಿಫುಲ ಅವಕಾಶ ಎಲ್.ಕೆ. ಅತೀಕ್

ಶಿರಸಿ ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ರಾಜ್ಯ

Spread the love

ಮಂಗಳೂರು: ಕರಾವಳಿಯಲ್ಲಿ ಐಟಿ–ಬಿಟಿ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ವಿಫುಲ ಅವಕಾಶಗಳಿದ್ದು, ಈ ಕುರಿತು ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಬೀಚ್ ಪ್ರವಾಸೋದ್ಯಮದ ಜೊತೆಗೆ ಐಟಿ–ಬಿಟಿ ಕ್ಷೇತ್ರಕ್ಕೆ ಪೂರಕವಾದ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹಾಗೂ ಬೆಂಗಳೂರು ಬಿಸಿನೆಸ್ ಕಾರಿಡಾರ್ ಅಧ್ಯಕ್ಷ ಎಲ್.ಕೆ. ಅತೀಕ್ ಹೇಳಿದರು.

<

ಮಂಗಳೂರಿನ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಬುಧವಾರ ನಡೆದ ‘ಮಂಗಳೂರು ಟೆಕ್ನೋವಾಂಜ್–2026’ರ 6ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮೈಸೂರು, ಮಂಗಳೂರು–ಉಡುಪಿ, ಹುಬ್ಬಳ್ಳಿ–ಧಾರವಾಡ ಹಾಗೂ ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾದ ಕ್ಲಸ್ಟರ್‌ಗಳು ರೂಪುಗೊಳ್ಳುತ್ತಿವೆ. ಹುಬ್ಬಳ್ಳಿ–ಧಾರವಾಡದಲ್ಲಿ ಉತ್ಪಾದನೆ, ರಕ್ಷಣೆ ಮತ್ತು ಅಂತರಿಕ್ಷ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಂಗಳೂರು–ಉಡುಪಿ ಭಾಗದಲ್ಲಿ ಐಟಿ–ಬಿಟಿ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಅವಕಾಶವಿದೆ ಎಂದು ಅವರು ಹೇಳಿದರು.

ಸರ್ಫಿಂಗ್‌ಗೆ ಉತ್ತೇಜನ

ಮಂಗಳೂರು–ಉಡುಪಿ ಭಾಗದಲ್ಲಿ ಸ್ಮಾರ್ಟ್ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮದ ಜೊತೆಗೆ ಜಲಕ್ರೀಡೆಗಳಿಗೆ ಒತ್ತು ನೀಡಬೇಕು. ಸರ್ಫಿಂಗ್‌ಗೆ ಪೂರಕವಾದ ಹಲವು ಸಮುದ್ರ ತೀರಗಳು ಇಲ್ಲಿದ್ದು, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮಂಗಳೂರು ದೇಶದ ಸರ್ಫಿಂಗ್ ರಾಜಧಾನಿಯಾಗಿ ರೂಪುಗೊಳ್ಳುತ್ತಿದೆ. ವಿದೇಶಗಳಿಂದಲೂ ಜಲಕ್ರೀಡಾ ಆಸಕ್ತರು ಇಲ್ಲಿಗೆ ಬಂದು ಹೋಂಸ್ಟೇಗಳಲ್ಲಿ ಉಳಿದು ಸರ್ಫಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಐಟಿ–ಬಿಟಿ ಜೊತೆಗೆ ಪ್ರವಾಸೋದ್ಯಮದ ಇತರ ಆಯಾಮಗಳ ಬಗ್ಗೆಯೂ ಗಮನಹರಿಸಬೇಕು ಎಂದರು.

ಕರ್ನಾಟಕದ ಕರಾವಳಿ ವಿಶ್ವದರ್ಜೆಯ ಸ್ವಚ್ಛ, ಸುರಕ್ಷಿತ ಹಾಗೂ ಆಕರ್ಷಕ ಪ್ರದೇಶವಾಗಿದೆ. ಸುಂದರ ಸಮುದ್ರ ತೀರ, ಪಶ್ಚಿಮ ಘಟ್ಟ ಹಾಗೂ ಉತ್ತಮ ಜೀವನಕ್ಕೆ ಪೂರಕವಾದ ಪರಿಸರ ಇಲ್ಲಿದೆ. ಈ ಅಂಶಗಳನ್ನು ಮುಂದಿಟ್ಟುಕೊಂಡು ಹೂಡಿಕೆದಾರರನ್ನು ಆಕರ್ಷಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಕಳೆದ ಮೂರು ವರ್ಷಗಳಿಂದ ಸ್ಥಳೀಯ ಉದ್ಯಮಿಗಳಾದ ರೋಹಿತ್ ಭಟ್, ಗೌರವ್ ಸೇರಿದಂತೆ ಹಲವರು ಕೈಗೊಂಡಿರುವ ಪ್ರಯತ್ನಗಳಿಂದ ಮಂಗಳೂರಿನಲ್ಲಿ ಐಟಿ ಕ್ಷೇತ್ರದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಗಮನಾರ್ಹ ಪ್ರಗತಿ ಕಂಡುಬಂದಿದೆ ಎಂದರು.

ಉದ್ಯಮಕ್ಕೆ ಸಿದ್ಧರಾಗುವಂತೆ ಶಿಕ್ಷಣ

ರಾಜ್ಯದಲ್ಲಿ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಯೋಗವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಪಠ್ಯಕ್ರಮದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಪ್ರಸ್ತುತ ಪಠ್ಯಕ್ರಮದಲ್ಲಿ ಬದಲಾವಣೆ ಅಗತ್ಯವಿದ್ದು, ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಉದ್ಯಮಕ್ಕೆ ಸಿದ್ಧರಾಗುವಂತೆ ಹೊಸ ಕೋರ್ಸ್‌ಗಳನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿದೆ ಎಂದು ಅತೀಕ್ ತಿಳಿಸಿದರು.

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀನುಗಾರಿಕಾ ಕಾಲೇಜನ್ನು ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯವಾಗಿ ಪರಿವರ್ತಿಸುವ ನಿರ್ಧಾರ ಕೈಗೊಂಡಿರುವುದು ಮಹತ್ವದ ಹೆಜ್ಜೆಯಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಸಂಶೋಧನೆ ಹಾಗೂ ಮಾನವ ಸಂಪನ್ಮೂಲವನ್ನು ಒದಗಿಸಬಲ್ಲವು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಅಸೆಂಚರ್ ಇಂಡಿಯಾದ ಹಿರಿಯ ದೇಶೀಯ ಆಡಳಿತ ನಿರ್ದೇಶಕ ಅಜಯ್ ವಿಜಿ ಹಾಗೂ ಟೆಕ್ ಮಹೀಂದ್ರಾದ ಮುಖ್ಯ ಅಧಿಕಾರಿ ರಿಚರ್ಡ್ ಲೋಬೊ ಅವರೊಂದಿಗೆ ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ ಸಂವಾದ ನಡೆಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

sanotsh