ಮಂಗಳೂರು: ಮಕ್ಕಳಲ್ಲಿ ಶ್ರವಣ ಸಮಸ್ಯೆ ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಬೇಕು. ಆರಂಭಿಕ ಹಂತದಲ್ಲೇ ಶ್ರವಣ ತಪಾಸಣೆ ನಡೆಸುವುದರಿಂದ ಸಮಸ್ಯೆಯನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ಹಾಗೂ ಪುನರ್ವಸತಿ ಸೇವೆಗಳನ್ನು ಸಕಾಲದಲ್ಲಿ ಒದಗಿಸಲು ಸಾಧ್ಯ ಎಂದು ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ, ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ವಿಭಾಗ ಹಾಗೂ ಜಿಲ್ಲಾ ಆರಂಭಿಕ ಹಸ್ತಕ್ಷೇಪ ಕೇಂದ್ರದ ವತಿಯಿಂದ ವಿಶ್ವ ಶ್ರವಣ ದೋಷ ದಿನಾಚರಣೆ–2026 ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಶ್ರವಣ ದೋಷದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು. ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ಆರೋಗ್ಯ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಪೋಷಕರಿಗೆ ಸಲಹೆ ನೀಡಿದರು.
ಕಿವಿ, ಮೂಗು ಮತ್ತು ಗಂಟಲು ತಜ್ಞೆ ಡಾ. ರತ್ನಾವತಿ ಅವರು ಶ್ರವಣದ ಮಹತ್ವ ಹಾಗೂ ಶ್ರವಣ ದೋಷದ ಕುರಿತು ಮಾಹಿತಿ ನೀಡಿದರು. ಮಕ್ಕಳಲ್ಲಿ ಶ್ರವಣ ಸಮಸ್ಯೆಯ ಯಾವುದೇ ಲಕ್ಷಣ ಕಂಡುಬಂದರೆ ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ಮಕ್ಕಳ ತಜ್ಞ ಡಾ. ಲಿಫಾಮ್ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಶ್ರವಣದ ಪಾತ್ರ ಮಹತ್ವದ್ದಾಗಿದೆ. **ಆರಂಭಿಕ ಶ್ರವಣ ತಪಾಸಣೆ ನಡೆಸುವುದರಿಂದ ಶ್ರವಣ ದೋಷವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಬಹುದು. ಸಮಸ್ಯೆಯನ್ನು ಬೇಗ ಗುರುತಿಸಿದರೆ ಸೂಕ್ತ ಚಿಕಿತ್ಸೆ, ಶ್ರವಣ ಸಾಧನ, ವಾಕ್ ಮತ್ತು ಭಾಷಾ ಚಿಕಿತ್ಸೆ ಸೇರಿದಂತೆ ಅಗತ್ಯ ಪುನರ್ವಸತಿ ಸೇವೆಗಳನ್ನು ಸಮಯಕ್ಕೆ ಸರಿಯಾಗಿ ಆರಂಭಿಸಲು ಸಾಧ್ಯ ಎಂದರು.
ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ. ವಿಶ್ವವಿಜೇತ್ ಅವರು ಶ್ರವಣ ದೋಷ ಹೊಂದಿರುವವರ ಮಾನವ ಹಕ್ಕುಗಳ ಘೋಷಣೆ ಹಾಗೂ ಅಂತರರಾಷ್ಟ್ರೀಯ ಶ್ರವಣ ದೋಷ ದಿನಾಚರಣೆ–2026ರ ಧ್ಯೇಯ ವಾಕ್ಯದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಪುಟ್ಟರಾಜು, ಮೆಟ್ರನ್ ಟ್ರೇಸಿಯಮ್ಮ, ಮೆಟ್ರನ್ ಎಲಿಯಮ್ಮ, ಶ್ರವಣ ತಜ್ಞ ಹಾಗೂ ವಾಕ್ ಚಿಕಿತ್ಸಕ ಅಮೀಷಾ, ಪೋಷಕರು, ಮಕ್ಕಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಡಿ.ಇ.ಐ.ಸಿ. ಮನೋವಿಜ್ಞಾನಿ ರಶ್ಮಿ ರೈ ಕಾರ್ಯಕ್ರಮ ನಿರೂಪಿಸಿದರು.
What do you feel about this post?
Like
Love
Happy
Haha
Sad







