ಮಂಗಳೂರು: ನವರಾತ್ರಿಯ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾಗುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವ ಆರಂಭಗೊಂಡಿದೆ. ಭಕ್ತಿಭಾವದ ವಾತಾವರಣದಲ್ಲಿ ಭಾನುವಾರ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಈ ಬಾರಿ ಮೊದಲ ಬಾರಿಗೆ ಮಹಿಳಾ ದಸರಾ ಆಯೋಜಿಸಿರುವುದು ವಿಶೇಷವಾಗಿದೆ.
ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕ್ಷೇತ್ರದ ದರ್ಬಾರು ಮಂಟಪದಲ್ಲಿ ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ ಹಾಗೂ ಆದಿಶಕ್ತಿಯೊಂದಿಗೆ ಸ್ಕಂದಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ಮತ್ತು ಕೂಷ್ಮಾಂಡಿನಿ ದೇವಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.
ಶಾಸಕ ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿ ಟ್ರಸ್ಟಿಗಳಾದ ಎಚ್.ಎಸ್. ಸಾಯಿರಾಂ, ಸಂತೋಷ್ ಕುಮಾರ್ ಜೆ., ಜಗದೀಪ್ ಡಿ. ಸುವರ್ಣ, ಕೃತಿನ್ ಅಮೀನ್, ಕಿಶೋರ್ ದಂಡೆಕೇರಿ, ಮಾಲತಿ ಜನಾರ್ದನ ಪೂಜಾರಿ, ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ. ಅನಸೂಯ ಬಿ.ಟಿ. ಸಾಲಿಯಾನ್, ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ, ಸದಸ್ಯರಾದ ವೇದ ಕುಮಾರ್, ಕೆ. ಚಿತ್ತರಂಜನ್ ಗರೋಡಿ, ಹರೀಶ್ ಕುಮಾರ್ ಬೆಳ್ತಂಗಡಿ, ವಿಶ್ವನಾಥ ಕಾಸರಗೋಡು, ಎಸ್. ಜಯ ವಿಕ್ರಮ್, ಜಿತಿನ್ ಅತ್ತಾವರ, ಹರಿಕೃಷ್ಣ ಬಂಟ್ವಾಳ, ಎನ್. ಹರೀಶ್ಚಂದ್ರ, ರಾಮನಾಥ್ ಕಾರಂದೂರು, ಧೂಮಪ್ಪ ಮೇಸ್ತ್ರಿ, ಲೀಲಾಕ್ಷ ಕರ್ಕೇರ, ಶೈಲೇಂದ್ರ ವೈ. ಸುವರ್ಣ, ಸೂರ್ಯಕಾಂತ್ ಜೆ. ಸುವರ್ಣ, ರಾಧಾಕೃಷ್ಣ, ಚಂದನ್ ದಾಸ್, ಡಿ.ಡಿ. ಕಟ್ಟೆಮಾರ್, ಪಿ.ಕೆ. ಗೌರವಿ ರಾಜಶೇಖರ್, ಬಿ. ವಾಸುದೇವ ಕೋಟ್ಯಾನ್, ಲತೀಶ್ ಎಂ. ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು
ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿಯ ಸಹಯೋಗದೊಂದಿಗೆ ಈ ಬಾರಿಯ ಮಂಗಳೂರು ದಸರಾ ನಡೆಯುತ್ತಿದೆ ಎಂದು ತಿಳಿಸಿದರು.
ಈ ಬಾರಿ ಮೊದಲ ಬಾರಿಗೆ ಮಹಿಳಾ ದಸರಾ ಆಯೋಜಿಸಲಾಗುತ್ತಿದೆ. ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅಕ್ಟೋಬರ್ 20ರಂದು ಅಕ್ಷರಾಭ್ಯಾಸ ಕಾರ್ಯಕ್ರಮವೂ ನಡೆಯಲಿದೆ. ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ವ್ಯವಸ್ಥೆಗಳ ನಿರ್ವಹಣೆಗಾಗಿ ಒಂದು ಸಾವಿರಕ್ಕೂ ಅಧಿಕ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.


