ಕಾರವಾರ: ಆತ್ಮಸ್ಥೈರ್ಯ ಮತ್ತು ಸತತ ಪ್ರಯತ್ನದಿಂದ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಪ್ರಾಚಾರ್ಯರ ಸಂಘದ ವತಿಯಿಂದ ಆಯೋಜಿಸಲಾದ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ
ವಿದ್ಯಾರ್ಥಿಗಳಿಗೆ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವ ಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇಂತಹ ಅನೇಕ ಅಡೆತಡೆಗಳ ನಡುವೆಯೂ
ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಪಾಲಕರು, ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಅಗತ್ಯವಿದ್ದು, ಇಂತಹ ಮಾರ್ಗದರ್ಶನ ದೊರೆತ ಕಾರಣ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಹೆಸ್ಕಾಂ ಸಾರಿಗೆ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಪೂರಕ ಸೌಲಭ್ಯಗಳನ್ನು ಒದಗಿಸಿವೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಹಾಗೂ ಪೋಷಕರಿಗೆ ಹೆಮ್ಮೆ ತರಬೇಕು ಎಂದರು.
ಜಿಲ್ಲಾಡಳಿತದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿಗಳು ನಮ್ಮ ಈ ಸಾದನೆಗೆ ಪೋಷಕರು, ಶಿಕ್ಷಕರು, ನೀಡಿದ ಬೆಂಬಲವನ್ನು ಸ್ಮರಿಸಿ, ಜೀವನದಲ್ಲಿ ಶಿಸ್ತು ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ, ವಾಣಿಜ್ಯ ವಿಭಾಗದಲ್ಲಿ ಸಾಧನೆ ಮಾಡಿದ ಹೊನ್ನಾವರದ ಎಸ್ಡಿಎಂ ಪಿಯು ಕಾಲೇಜಿನ ಚಿನ್ಮಯಿ ಮಂಜುನಾಥ್ ಶೆಟ್ಟಿ, ಸಿರಸಿಯ ಎಂಇಎಸ್ ಪಿಯು ಕಾಲೇಜಿನ ಪ್ರಣವ್ ಎನ್ ಭಟ್, ಭಟ್ಕಳ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಸಂಜನಾ ನಾಗಪ್ಪ ನಾಯ್ಕ, ಹಾಗೂ ಭಟ್ಕಳ ಅಂಜುಮನ್ ಪಿಯು ಮಹಿಳಾ ಕಾಲೇಜಿನ ಅಕ್ಷಾ ಶ್ರೀನ್, ಹಾಗೂ ಶಿರಸಿ ಎಂಇಎಸ್ ಪಿಯು ಕಾಲೇಜಿನ ಅರ್ಪಿತಾ ಎಸ್ ಹೆಗಡೆ, ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ ಶಿರಸಿ ಎಂಇಎಸ್ ಪಿಯು ಕಾಲೇಜಿನ ಚೈತನ್ಯ ಜಿ ಹೆಗಡೆ ಮತ್ತು ಭೂಮಿಕಾ ಡಿ ನಾಯಕ ,ಭಟ್ಕಳದ ಅಂಜುಮನ್ ಪಿಯು ಮಹಿಳಾ ಕಾಲೇಜಿನ ಮೈಮುನಾ ಅಜೈಬ್, ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ತೇಜಸ್ ರವಿ ನಾಯಕ್, ಸಿದ್ದಾಪುರದ ಚೇತನಾ ಪಿಯು ಕಾಲೇಜಿನ ರಘು ಶರಚಂದ್ರ ಹೆಗಡೆ, ಕಲಾ ವಿಭಾಗದಲ್ಲಿ ಸಾಧನೆ ಮಾಡಿದ ಭಟ್ಕಳದ ಅಂಜುಮನ್ ಪಿಯು ಮಹಿಳಾ ಕಾಲೇಜು ಶಿಫಾ ಅನಮ್, ದಾಂಡೇಲಿಯ ತೌಹೀದ್ ಪಿಯು ಕಾಲೇಜಿನ ಲಯಬಾ ಪರ್ವೀನ್ ಮೊಹಮ್ಮದ್ ಇಬ್ರಾಹಿಂ , ಕುಮಟಾ ಹಿರೇಗುತ್ತಿ ಸರ್ಕಾರಿ ಪಿಯು ಕಾಲೇಜು ಜಾಹ್ನವಿ ಮಾಸ್ತಿ ಗೌಡ, ಕಾರವಾರದ ಸರ್ಕಾರಿ ಪಿಯು ಕಾಲೇಜಿನ ಶಾಕ್ಷಿ ವಿನೋದ್ ನಾಯ್ಕ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸತೀಶ್ ನಾಯ್ಕ, ಪ್ರಾಚಾರ್ಯ ಸಂಘದ ಪ್ರಧಾನ ಕಾರ್ಯದರ್ಶಿ ಅಮೃತ್ ರಾಮನಾಥನ್, ಉಪನ್ಯಾಸಕ ಸಂಘದ ಅಧ್ಯಕ್ಷ ಪ್ರವೀಣ್ ನಾಯಕ ಹಾಗೂ ವಿದ್ಯಾರ್ಥಿಗಳು, ಪೋಷಕರು ಮತ್ತಿತರರು ಇದ್ದರು.




