ಮುಂಗಾರು ಎದುರಿಸಲು ಸಜ್ಜು, 115 ಕಡೆಗೆ ಕಾಳಜಿ ಕೇಂದ್ರ, ತುರ್ತು ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್‌ , ಎಸ್‌ಡಿಆರ್‌ಎಫ್‌ ತಂಡ: ಜಿಲ್ಲಾಧಿಕಾರಿ ದರ್ಶನ್

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ
<

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪಗಳನ್ನು ಎದುರಿಸಲು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ಜಿಲ್ಲೆಯ 92 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಲಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

<

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ 91 ಶಾಲಾ ಕಟ್ಟಡಗಳು ಹಾಗೂ 137 ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಅನುಮೋದನೆ ನೀಡಲಾಗಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಮೂಲಕ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಅಂಗನವಾಡಿಗಳಿಗೆ ₹2.5 ಕೋಟಿ ಹಾಗೂ ಶಾಲಾ ಕಟ್ಟಡಗಳ ದುರಸ್ತಿಗೆ ₹1.5 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಬಳಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಿರುಕು ಬಿಟ್ಟಿರುವ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳನ್ನು ಗುರುತಿಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ಅಗತ್ಯವಿದ್ದರೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸದರು.

ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಜಿಲ್ಲೆಯಲ್ಲಿ 115 ಪರಿಹಾರ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ಸೂಚಿಸಲಾಗಿದೆ. ಶಾಲೆ ಹಾಗೂ ಅಂಗನವಾಡಿಗಳ ಸುತ್ತಮುತ್ತ ಅಪಾಯಕಾರಿಯಾಗಿರುವ ಮರದ ಕೊಂಬೆಗಳು ಮತ್ತು ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹಾಗೂ ಮೆಸ್ಕಾಂಗೆ ಸೂಚನೆ ನೀಡಲಾಗಿದೆ.

ವಿಪತ್ತು ನಿರ್ವಹಣೆಯ ಭಾಗವಾಗಿ 25 ಸದಸ್ಯರ ಎನ್‌ಡಿಆರ್‌ಎಫ್‌ ತಂಡವನ್ನು ಪುತ್ತೂರಿನಲ್ಲಿ ಹಾಗೂ 10 ಸದಸ್ಯರ ಎಸ್‌ಡಿಆರ್‌ಎಫ್‌ ತಂಡವನ್ನು ಸುಬ್ರಹ್ಮಣ್ಯದಲ್ಲಿ ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ 28 ಬೋಟ್‌ಗಳು, ಚೈನ್‌ಸಾ ಯಂತ್ರಗಳು, ಲೈಫ್ ಜಾಕೆಟ್‌ಗಳು, ಲೈಫ್ ಬಾಯ್‌ಗಳು, ಜೆಸಿಬಿ, ಟಿಪ್ಪರ್ ಹಾಗೂ ಕ್ರೇನ್‌ಗಳನ್ನು ಸಜ್ಜುಗೊಳಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳು ಸೇರಿದಂತೆ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘಟನಾ ನಿರ್ವಾಹಕರನ್ನು ನೇಮಿಸಲಾಗಿದೆ. ಸಾರ್ವಜನಿಕರಿಂದ ದೂರು ಸ್ವೀಕರಿಸಲು ನಿರಂತರ ಸಹಾಯವಾಣಿ ಮೂರು ತಿಂಗಳ ಕಾಲ ಕಾರ್ಯನಿರ್ವಹಿಸಲಿದೆ. ಜಿಲ್ಲೆಯಲ್ಲಿ ಗುರುತಿಸಲಾದ 92 ಭೂಕುಸಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 169 ಹಾಗೂ 275ರ ಅಪಾಯದ ತಾಣಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸಲಾಗುವುದು. ರೆಡ್ ಅಲರ್ಟ್ ಸಂದರ್ಭಗಳಲ್ಲಿ ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಅಥವಾ ಪರಿಹಾರ ಕೇಂದ್ರಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಕಾರ್ಬಾರಿ ವಿನಾಯಾಕ ನಾರ್ವಡೆ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಇದ್ದರು.

ಹೈಲೈಟ್ಸ್‌

• 92 ಭೂಕುಸಿತ ಸಂಭವನೀಯ ಪ್ರದೇಶಗಳ ಗುರುತು
• 115 ಪರಿಹಾರ ಕೇಂದ್ರಗಳ ಸಿದ್ಧತೆ
• 91 ಶಾಲೆ, 137 ಅಂಗನವಾಡಿಗಳ ದುರಸ್ತಿಗೆ ಅನುಮೋದನೆ
• ಶಾಲೆಗಳಿಗೆ ₹1.5 ಕೋಟಿ, ಅಂಗನವಾಡಿಗಳಿಗೆ ₹2.5 ಕೋಟಿ ಬಿಡುಗಡೆ
• ಪುತ್ತೂರಲ್ಲಿ 25 ಸದಸ್ಯರ ಎನ್‌ಡಿಆರ್‌ಎಫ್‌ ತಂಡ ನಿಯೋಜನೆ
• ಸುಬ್ರಹ್ಮಣ್ಯದಲ್ಲಿ 10 ಸದಸ್ಯರ ಎಸ್‌ಡಿಆರ್‌ಎಫ್‌ ತಂಡ ಸಜ್ಜು
• 28 ಬೋಟ್‌, ಕ್ರೇನ್‌, ಟಿಪ್ಪರ್‌, ರಕ್ಷಣಾ ಉಪಕರಣಗಳ ವ್ಯವಸ್ಥೆ
• ಮೂರು ತಿಂಗಳ ಕಾಲ 24×7 ಸಹಾಯವಾಣಿ ಕಾರ್ಯಾಚರಣೆ

ಕೋಟ್‌

ಮುಂಗಾರು ಅವಧಿಯಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಜನರು ರೆಡ್ ಅಲರ್ಟ್ ಸಂದರ್ಭಗಳಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು.

ದರ್ಶನ್ ಎಚ್.ವಿ., ಜಿಲ್ಲಾಧಿಕಾರಿ

ಶಾಲೆ-ಅಂಗನವಾಡಿ ದುರಸ್ತಿಗೆ ₹4 ಕೋಟಿ: ಡಿಸಿ ದರ್ಶನ್

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ 91 ಶಾಲಾ ಕಟ್ಟಡಗಳು ಹಾಗೂ 137 ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಅನುಮೋದನೆ ನೀಡಲಾಗಿದೆ. ಅಂಗನವಾಡಿ ಕಟ್ಟಡಗಳ ದುರಸ್ತಿಗೆ ₹2.5 ಕೋಟಿ ಹಾಗೂ ಶಾಲಾ ಕಟ್ಟಡಗಳಿಗೆ ₹1.5 ಕೋಟಿ ಬಿಡುಗಡೆ ಮಾಡಲಾಗಿದೆ. ಬಿರುಕು ಬಿಟ್ಟಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಗುರುತಿಸಿ ತ್ವರಿತ ದುರಸ್ತಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿ‌ಲ್ಲಾಧಿಕಾರಿ ಡಿಸಿ ದರ್ಶನ್ ತಿಳಿಸಿದರು.

ಸಹಾಯವಾಣಿ ಸಂಖ್ಯೆಗಳು

* ಜಿಲ್ಲಾಡಳಿತ – 1077 / 0824-2442590
* ಮಂಗಳೂರು ಮಹಾನಗರ ಪಾಲಿಕೆ – 0824-2220306 / 2220319
* ಮಂಗಳೂರು ತಾಲ್ಲೂಕು – 0824-2220587
* ಉಳ್ಳಾಲ ತಾಲ್ಲೂಕು – 0824-2204424
* ಬಂಟ್ವಾಳ – 7337669102
* ಪುತ್ತೂರು – 08251-230349
* ಸುಳ್ಯ – 08257-231231
* ಕಡಬ – 08251-260435
* ಬೆಳ್ತಂಗಡಿ – 08256-232047
* ಮೂಡುಬಿದಿರೆ – 08258-238100
* ಮೂಲ್ಕಿ – 0824-2294496

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *