ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರಿಗೆ ಮಹತ್ವದ ಪದೋನ್ನತಿ ದೊರೆತಿದ್ದು, ಒಟ್ಟು 29 ಸಿಬ್ಬಂದಿಯನ್ನು ಪ್ರಥಮ ದರ್ಜೆ ಸಹಾಯಕ ಹಾಗೂ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹುದ್ದೆಗಳಿಗೆ ಬಡ್ತಿ ನೀಡಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಕಂದಾಯ ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು–2026ರ ಅನ್ವಯ ಈ ಪದೋನ್ನತಿ ಪ್ರಕ್ರಿಯೆ ನಡೆಸಲಾಗಿದೆ. ಜಿಲ್ಲಾ ಕಂದಾಯ ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ದ್ವಿತೀಯ ದರ್ಜೆ ಸಹಾಯಕರ ಅಂತಿಮ ಸಂಯುಕ್ತ ಜೇಷ್ಠತಾ ಪಟ್ಟಿ ಪ್ರಕಟವಾದ ಬಳಿಕ ಜೂನ್ 9ರಂದು ಇಲಾಖಾ ಮುಂಬಡ್ತಿ ಸಮಿತಿ ಸಭೆ ನಡೆದಿತ್ತು.
ಸಭೆಯಲ್ಲಿ ಸಿಬ್ಬಂದಿಯ ಸೇವಾ ದಾಖಲೆಗಳು ಹಾಗೂ ನಿಯಮಾನುಸಾರ ಅರ್ಹತೆಗಳನ್ನು ಪರಿಶೀಲಿಸಿದ ಸಮಿತಿಯು ಪದೋನ್ನತಿಗೆ ಅನುಮೋದನೆ ನೀಡಿದ್ದು, ಅದರ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಬಡ್ತಿ ಆದೇಶ ಹೊರಡಿಸಿದ್ದಾರೆ.
ಡಿಸಿ, ಎಡಿಸಿಗೆ ಸನ್ಮಾನ
ಪದೋನ್ನತಿ ಆದೇಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹಾಗೂ ಎಡಿಸಿ ಸಾಜಿದ್ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚಾಂದಬಾಷಾ ಮುಲ್ಲಾ, “ರಾಜ್ಯದಲ್ಲೇ ಮೊದಲ ಬಾರಿಗೆ ಈ ರೀತಿಯ ಪದೋನ್ನತಿ ಪ್ರಕ್ರಿಯೆ ಯಶಸ್ವಿಯಾಗಿ ಜಾರಿಗೊಂಡಿರುವುದು ಹೆಮ್ಮೆಯ ಸಂಗತಿ. ಈ ಪ್ರಕ್ರಿಯೆ ಯಶಸ್ವಿಯಾಗಲು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಶಿರಸ್ತೇದಾರ ಶೇಖ್, ವಿಷಯ ನಿರ್ವಾಹಕ ಶಿವಾನಂದ ಸಾಳುಂಕೆ ಸೇರಿದಂತೆ ಸಂಬಂಧಿತ ಅಧಿಕಾರಿಗಳ ಸಹಕಾರ ಮಹತ್ವದ್ದಾಗಿದೆ” ಎಂದು ಕೃತಜ್ಞತೆ ಸಲ್ಲಿಸಿದರು.
ಅಲ್ಲದೆ, ರಾಜ್ಯಾಧ್ಯಕ್ಷ ಯೋಗೇಶ್ ನಾಯ್ಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯ್ಕ್ ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳಿಗೂ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಕ್ಷಿತ ಪೂಜಾರಿ, ಖಜಾಂಚಿ ಚರಣ್ ಗೌಡ, ಉಪಾಧ್ಯಕ್ಷ ಕೋಟ್ರೇಶ ಎನ್.ಬಿ., ಸಂದೀಪ್, ಮಂಜುನಾಥ ನಾಯ್ಕ, ಲತಾ ನಾಯ್ಕ, ಆಶಾ ಭಟ್ಟ, ಸಂತೋಷ, ಗಣೇಶ ಕುಲಾಲ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಖ್ಯಾಂಶಗಳು
* ಉತ್ತರ ಕನ್ನಡ ಜಿಲ್ಲೆಯ 29 ಕಂದಾಯ ಸಿಬ್ಬಂದಿಗೆ ಪದೋನ್ನತಿ
* ಪ್ರಥಮ ದರ್ಜೆ ಸಹಾಯಕ ಹಾಗೂ ಕಂದಾಯ ನಿರೀಕ್ಷಕ ಹುದ್ದೆಗಳಿಗೆ ಬಡ್ತಿ
* ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ
* ಡಿಸಿ ಹಾಗೂ ಎಡಿಸಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಸನ್ಮಾನ
* ರಾಜ್ಯದಲ್ಲೇ ಮೊದಲ ಬಾರಿಗೆ ಮಾದರಿಯ ಪದೋನ್ನತಿ ಪ್ರಕ್ರಿಯೆ ಎಂಬ ಸಂಘದ ಅಭಿಪ್ರಾಯ
What do you feel about this post?
Like
Love
Happy
Haha
Sad
