ಕಾರವಾರ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಜೆಇಇ ಹಾಗೂ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿ ಅನೀಶ್ ನಾಯ್ಕ್ ಅವರನ್ನು ಧಾರವಾಡ ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಕಾರವಾರ ಬಾಲ ಮಂದಿರ ಪ್ರೌಢಶಾಲೆ ಆಶ್ರಯದಲ್ಲಿ ಸನ್ಮಾನಿಸಲಾಯಿತು.

ಅನೀಶ್ ನಾಯ್ಕ್ ದ್ವಿತೀಯ ಪಿಯುಸಿಯಲ್ಲಿ ಶೇ 96 ಅಂಕ ಗಳಿಸಿದ್ದು, ಜೆಇಇ ಮೇನ್ಸ್ನಲ್ಲಿ 99.56 ಪರ್ಸೆಂಟೈಲ್, ಜೆಇಇ ಅಡ್ವಾನ್ಸ್ನಲ್ಲಿ 5,809ನೇ ರ್ಯಾಂಕ್ ಹಾಗೂ ಕರ್ನಾಟಕ ಸಿಇಟಿಯಲ್ಲಿ 892ನೇ ರ್ಯಾಂಕ್ ಪಡೆದಿದ್ದಾರೆ. ಎಸ್ಒಎಫ್ ಅಂತರರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ 189ನೇ ರ್ಯಾಂಕ್, ವಲಯ ಮಟ್ಟದಲ್ಲಿ 10ನೇ ರ್ಯಾಂಕ್ ಗಳಿಸಿದ್ದು, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಪ್ರವೇಶದ ಮೊದಲ ಹಂತದ ಪರೀಕ್ಷೆ ತೇರ್ಗಡೆ ಹೊಂದಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲ ಮಂದಿರ ಶಾಲೆಯ ಮುಖ್ಯ ಶಿಕ್ಷಕಿ ಅಂಜಲಿ ಮಾನೆ, ಅನೀಶ್ ಸಾಧನೆ ಶಾಲೆಗೆ ಹೆಮ್ಮೆ ತಂದಿದೆ. ಶಾಲಾ ದಿನಗಳಿಂದಲೇ ಪರಿಶ್ರಮ, ಶಿಸ್ತು ಹಾಗೂ ಉತ್ತಮ ನಡವಳಿಕೆಯಿಂದ ಗುರುತಿಸಿಕೊಂಡಿದ್ದ ವಿದ್ಯಾರ್ಥಿ, ಮುಂದೆಯೂ ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಅನೀಶ್ ನಾಯ್ಕ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಒಂದೇ ದಿನದಲ್ಲಿ ಸಿಗುವುದಿಲ್ಲ. ನಿರಂತರ ಪರಿಶ್ರಮ, ವಿಷಯದ ಆಳವಾದ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಯಶಸ್ಸಿನ ಮೂಲ. ನನ್ನ ಸಾಧನೆಗೆ ತಂದೆ–ತಾಯಿ, ಶಿಕ್ಷಕರು ಹಾಗೂ ಅರ್ಜುನ ಶಿಕ್ಷಣ ಸಂಸ್ಥೆಯ ಪ್ರೋತ್ಸಾಹ ಪ್ರಮುಖ ಕಾರಣ ಎಂದರು.
ಅನೀಶ್ ನಾಯ್ಕ್ ಅವರು ಪತ್ರಕರ್ತ ಕಡತೋಕ ಮಂಜು ಹಾಗೂ ಶಿಕ್ಷಕಿ ಶ್ವೇತಾ ನಾಯ್ಕ್ ಅವರ ಪುತ್ರ. ಕಾರ್ಯಕ್ರಮದಲ್ಲಿ ಅರ್ಜುನ ಶಿಕ್ಷಣ ಸಂಸ್ಥೆಯ ನಿರ್ದೇಶಕರು, ಬಾಲ ಮಂದಿರ ಶಾಲೆಯ ಪ್ರಾಚಾರ್ಯರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಯ ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
What do you feel about this post?
Like
Love
Happy
Haha
Sad



