ಕಾರವಾರ: ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐಗಳ ಪೋಸ್ಟಿಂಗ್ ಹಾಗೂ ಲಂಚದ ವ್ಯವಹಾರಕ್ಕೆ ಸಂಬಂಧಿಸಿದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪಿಎಸ್ಐಗಳನ್ನು ಅಮಾನತುಗೊಳಿಸಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಆದೇಶ ಹೊರಡಿಸಿದ್ದಾರೆ.
ಹಳಿಯಾಳ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್, ಅಪರಾಧ ವಿಭಾಗದ ಪಿಎಸ್ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿ ವರ್ಗಾವಣೆಯಾಗಿದ್ದ ವಿನೋದ್ ರೆಡ್ಡಿ ಅಮಾನತುಗೊಂಡವರು.
ಮೂವರು ಪಿಎಸ್ಐಗಳು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ಹುದ್ದೆಗೆ ಹಣದ ವ್ಯವಹಾರ, ಠಾಣೆಯ ಹಪ್ತಾ ಹಾಗೂ ಮೇಲಾಧಿಕಾರಿಗಳಿಗೆ ನೀಡಬೇಕಾದ ಮಾಮೂಲಿ ಕುರಿತು ಸಂಭಾಷಣೆ ನಡೆದಿದೆ ಎನ್ನಲಾಗಿತ್ತು.
ಆಡಿಯೊ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಪ್ರಕರಣ ಪೊಲೀಸ್ ಇಲಾಖೆಯಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಇಲಾಖೆಯ ಘನತೆಗೆ ಧಕ್ಕೆ ತಂದಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು.
ಎಎಸ್ಪಿ ನೇತೃತ್ವದ ತನಿಖಾ ತಂಡವು ನಡೆಸಿದ ವಿಚಾರಣೆಯಲ್ಲಿ ಮೂವರು ಪಿಎಸ್ಐಗಳ ವಿರುದ್ಧದ ಅಕ್ರಮ ಹಾಗೂ ಕರ್ತವ್ಯಲೋಪ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ವರದಿ ಸಲ್ಲಿಸಲಾಗಿದೆ. ಈ ವರದಿಯ ಆಧಾರದ ಮೇಲೆ ಮೂವರನ್ನೂ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಇಲಾಖೆಯ ಅಧಿಕಾರಿಗಳು ಕರ್ತವ್ಯದಲ್ಲಿ ಅಕ್ರಮ ಎಸಗದಂತೆ ಹಾಗೂ ಇಲಾಖೆಯ ಘನತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಿಂದ ದೂರವಿರುವಂತೆ ಈ ಕ್ರಮ ಎಚ್ಚರಿಕೆಯ ಸಂದೇಶ ನೀಡಿದೆ.
What do you feel about this post?
Like
Love
Happy
Haha
Sad





