ಮಂಗಳೂರು: ದಸರಾ ಹಬ್ಬದ ಸಂಭ್ರಮದಲ್ಲಿ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಬಯಸುವ ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ವಿವಿಧ ವಿಶೇಷ ಪ್ಯಾಕೇಜ್ ಪ್ರವಾಸಗಳನ್ನು ಆಯೋಜಿಸಿದೆ ಎಂದು ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 11ರಿಂದ 20ರವರೆಗೆ ಮಂಗಳೂರಿನಿಂದ ನವದುರ್ಗ ದರ್ಶನ, ತಲಕಾವೇರಿ–ಭಾಗಮಂಡಲ, ಕೊಲ್ಲೂರು, ಸಿಗಂದೂರು ಹಾಗೂ ಶೃಂಗೇರಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ವಿಶೇಷ ಬಸ್‌ಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿದೆ. ಸಾರ್ವಜನಿಕರು ಮುಂಗಡವಾಗಿ ಆಸನ ಕಾಯ್ದಿರಿಸಿಕೊಳ್ಳಲು ಕೆಎಸ್‌ಆರ್‌ಟಿಸಿ ಜಾಲತಾಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರು ದಸರಾ ನವದುರ್ಗ ದರ್ಶನ
ಬೆಳಿಗ್ಗೆ 8ಕ್ಕೆ ಮಂಗಳೂರು ಬಸ್ ನಿಲ್ದಾಣದಿಂದ ಹೊರಡುವ ಬಸ್ ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರ ಶ್ರೀ ಮಾರಿಯಮ್ಮ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಹೊಸನಾಡು ಕೊಡ್ಯಾಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಮಾರಿಯಮ್ಮ ದೇವಸ್ಥಾನ ಹಾಗೂ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ತೆರಳಿ ರಾತ್ರಿ 8.30ಕ್ಕೆ ಮಂಗಳೂರು ತಲುಪಲಿದೆ. ವಯಸ್ಕರಿಗೆ ₹500 ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ ₹400 ಪ್ರಯಾಣ ದರ ನಿಗದಿಪಡಿಸಲಾಗಿದೆ.
ತಲಕಾವೇರಿ–ಭಾಗಮಂಡಲ
ಬೆಳಿಗ್ಗೆ 7ಕ್ಕೆ ಮಂಗಳೂರು ಬಸ್ ನಿಲ್ದಾಣದಿಂದ ಹೊರಡುವ ಬಸ್ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಶ್ರೀ ಭಗಂಡೇಶ್ವರ ಸ್ವಾಮಿ ದೇವಸ್ಥಾನ, ತ್ರಿವೇಣಿ ಸಂಗಮ, ಅಬ್ಬಿಪಾಲ್ಸ್ ಹಾಗೂ ರಾಜಾಸೀಟ್‌ಗೆ ತೆರಳಿ ರಾತ್ರಿ 9.30ಕ್ಕೆ ಮಂಗಳೂರು ತಲುಪಲಿದೆ. ವಯಸ್ಕರಿಗೆ ₹600 ಹಾಗೂ ಮಕ್ಕಳಿಗೆ ₹500 ಪ್ರಯಾಣ ದರ ನಿಗದಿಯಾಗಿದೆ.
ಮಂಗಳೂರು–ಕೊಲ್ಲೂರು
ಬೆಳಿಗ್ಗೆ 8ಕ್ಕೆ ಹೊರಡುವ ಬಸ್ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಕಾಪು ಮಾರಿಯಮ್ಮ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ರಾತ್ರಿ 8ಕ್ಕೆ ಮಂಗಳೂರು ತಲುಪಲಿದೆ. ವಯಸ್ಕರಿಗೆ ₹600 ಹಾಗೂ ಮಕ್ಕಳಿಗೆ ₹500 ಪ್ರಯಾಣ ದರ.
ಮಂಗಳೂರು–ಸಿಗಂದೂರು
ಬೆಳಿಗ್ಗೆ 7ಕ್ಕೆ ಮಂಗಳೂರಿನಿಂದ ಹೊರಡುವ ಬಸ್ ಕುಂದಾಪುರ ಮಾರ್ಗವಾಗಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ರಾತ್ರಿ 7.30ಕ್ಕೆ ಮಂಗಳೂರು ತಲುಪಲಿದೆ. ವಯಸ್ಕರಿಗೆ ₹700 ಹಾಗೂ ಮಕ್ಕಳಿಗೆ ₹600 ಪ್ರಯಾಣ ದರ ನಿಗದಿಪಡಿಸಲಾಗಿದೆ.
ಮಂಗಳೂರು–ಶೃಂಗೇರಿ
ಬೆಳಿಗ್ಗೆ 8ಕ್ಕೆ ಮಂಗಳೂರಿನಿಂದ ಹೊರಡುವ ಬಸ್ ಕೊಡ್ಯಾಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶ್ರೀ ಶಾರದಾಂಬ ದೇವಸ್ಥಾನ, ಹರಿಹರಪುರ ಮಠ, ಶ್ರೀ ಋಷ್ಯಶೃಂಗೇಶ್ವರ ದೇವಸ್ಥಾನ ಹಾಗೂ ಕಿಗ್ಗ ಕ್ಷೇತ್ರಕ್ಕೆ ತೆರಳಿ ರಾತ್ರಿ 7.30ಕ್ಕೆ ಮಂಗಳೂರು ತಲುಪಲಿದೆ. ವಯಸ್ಕರಿಗೆ ₹600 ಹಾಗೂ ಮಕ್ಕಳಿಗೆ ₹500 ಪ್ರಯಾಣ ದರ ನಿಗದಿಯಾಗಿದೆ.
ಪ್ರವಾಸಕ್ಕೆ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮಂಗಳೂರು ಮೊದಲನೇ ಘಟಕ ವ್ಯವಸ್ಥಾಪಕರು: 7760990713, ಮೂರನೇ ಘಟಕ ವ್ಯವಸ್ಥಾಪಕರು: 7760990723, ಮುಂಗಡ ಕಾಯ್ದಿರಿಸುವಿಕೆ ಕೌಂಟರ್: 9663211553, ಮಂಗಳೂರು ಬಸ್ ನಿಲ್ದಾಣ: 7760990720, ವಿಭಾಗೀಯ ಕಚೇರಿ: 7760990711, 9663266221 ಸಂಪರ್ಕಿಸಬಹುದು ಎಂದು ಮಂಗಳೂರು ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad




