
ಕಾರವಾರ: ಶಿರೂರು ಗುಡ್ಡಕುಸಿತ, ಕಾಳಿ ಸೇತುವೆ ದುರಂತ ಸೇರಿದಂತೆ ಹಲವು ಸವಾಲಿನ ಸಂದರ್ಭಗಳಲ್ಲಿ ಜಿಲ್ಲೆಯ ಜನರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ದೊರೆತ ಸಹಕಾರ ಎಂದಿಗೂ ಮರೆಯಲಾಗದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಳೆದ 2 ವರ್ಷ 4 ತಿಂಗಳ ಸೇವಾವಧಿ ಅತ್ಯಂತ ಸುಂದರ ಮತ್ತು ಅವಿಸ್ಮರಣೀಯ ಅನುಭವ ನೀಡಿದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಉತ್ತಮ ಸಹಕಾರ ನೀಡಿದ್ದಾರೆ. ಹಿಂದಿನ ಕಾರ್ಯನಿರ್ವಹಣೆಯ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಅತ್ಯುತ್ತಮ ಸಹಕಾರ ದೊರೆತಿದೆ ಎಂದರು.
ಶಿರೂರು ಗುಡ್ಡಕುಸಿತ ದುರಂತ, ಕಾಳಿ ಸೇತುವೆ ಕುಸಿತ, ಜನಗಣತಿ ಹಾಗೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ದೊರೆತ ಸಹಕಾರ ಸ್ಮರಣೀಯ. ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸೇರಿದಂತೆ ಎಲ್ಲ ಅಧಿಕಾರಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಕಚೇರಿಯ ಆಪ್ತ ಸಹಾಯಕರು, ವಾಹನ ಚಾಲಕರು, ಡಿ ದರ್ಜೆ ಸಿಬ್ಬಂದಿ ಹಾಗೂ ಅಂಗರಕ್ಷಕರ ಸೇವೆಯನ್ನೂ ಮರೆಯಲಾಗದು. ಉತ್ತಮ ನೆನಪುಗಳೊಂದಿಗೆ ಜಿಲ್ಲೆಯಿಂದ ನಿರ್ಗಮಿಸುತ್ತಿದ್ದೇನೆ ಎಂದು ಹೇಳಿದರು.

ಶಾಸಕ ಹಾಗೂ ಎಂಸಿಎ ಅಧ್ಯಕ್ಷ ಸತೀಶ್ ಸೈಲ್ ಮಾತನಾಡಿ, ಹಲವು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಕಾರ್ಯನಿರ್ವಹಿಸಿದ ಕೆ. ಲಕ್ಷ್ಮಿಪ್ರಿಯಾ ಅವರು ತಮ್ಮ ಕಾರ್ಯವೈಖರಿಯಿಂದ ಜಿಲ್ಲೆಯಲ್ಲಿ ಹಲವು ನೆನಪಿನಲ್ಲಿ ಉಳಿಯುವ ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಉತ್ತಮ ಸಾರ್ವಜನಿಕ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು.
ನೂತನ ಜಿಲ್ಲಾಧಿಕಾರಿ ಬೋಯರ್ ಹರ್ಷಲ್ ನಾರಾಯಣ ರಾವ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮುಖ್ಯಮಂತ್ರಿಗಳ ಹೊಸ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವುದರೊಂದಿಗೆ ಜನರಿಗೆ ಉತ್ತಮ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿ, ಶಿರೂರು ಮತ್ತು ಕಾಳಿ ಸೇತುವೆ ದುರಂತದ ನಿರ್ವಹಣೆ, ಕೇಣಿ ಬಂದರು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ಕುರಿತ ಸಾರ್ವಜನಿಕ ಅಹವಾಲು ಸಭೆಗಳು, ಕಡತ ವಿಲೇವಾರಿಯ ವೇಗ, ಬಗರ್ಹುಕುಂ ಅಡಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಹಕ್ಕುಪತ್ರ ವಿತರಣೆ, ಕಂದಾಯ ಸಿಬ್ಬಂದಿಗೆ ಪದೋನ್ನತಿ ಹಾಗೂ ಎಂಟು ವರ್ಷಗಳ ಬಳಿಕ ಕರಾವಳಿ ಉತ್ಸವ ಆಯೋಜನೆ ಸೇರಿದಂತೆ ಹಲವು ಸಾಧನೆಗಳನ್ನು ಸ್ಮರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಉಪ ವಿಭಾಗಾಧಿಕಾರಿ ರಮ್ಯಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಎಸ್. ಅಲ್ಲಾಬಕ್ಷ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು, ನಿರ್ಗಮಿತ ಹಾಗೂ ನೂತನ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದರು.






