
ನಗರದಲ್ಲಿ ನಡೆದ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಂ.ಎನ್.ಆರ್. ಪ್ರೊಡಕ್ಷನ್ ಈಗಾಗಲೇ ‘ಗಲಾಟೆ’ ಸಿನಿಮಾ ಹಾಗೂ ‘ಜೋಗುಳ’ ಧಾರಾವಾಹಿಯನ್ನು ನಿರ್ಮಿಸಿದೆ. ಉತ್ತಮ ಅಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ಮಿಸುವ ಉದ್ದೇಶದಿಂದ ‘ವಾದಿರಾಜ ವಾಲಗ ಮಂಡಳಿ’ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಪೋಸ್ಟರ್ ಬಿಡುಗಡೆ ಮೂಲಕ ಪ್ರೇಕ್ಷಕರಿಗೆ ಮೊದಲ ನೋಟ ಪರಿಚಯಿಸಿದ್ದೇವೆ ಎಂದರು.
ಬ್ರಹ್ಮಾವರ, ಮಂಗಳೂರು, ಮುಲ್ಕಿ ಹಾಗೂ ಕಾಸರಗೋಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎರಡು ಹಂತಗಳಲ್ಲಿ ಸುಮಾರು 55 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕರಾವಳಿ ಕನ್ನಡದ ಸಂಭಾಷಣಾ ಶೈಲಿ ಹಾಗೂ ಸ್ಥಳೀಯ ಸೊಗಡನ್ನು ಕಥೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಹಾಸ್ಯದ ಜೊತೆಗೆ ಕುತೂಹಲ ಮೂಡಿಸುವ ಕಥೆ ಚಿತ್ರದಲ್ಲಿದ್ದು, ಎಲ್ಲ ವಯೋಮಾನದವರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು, ಲಕ್ಷ್ಮಣ ಮಲ್ಲೂರು ಸೇರಿದಂತೆ ಕರಾವಳಿಯ ಹಲವು ಖ್ಯಾತ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕರು, ತನ್ವಿ ರಾವ್ ಹಾಗೂ ವೇನ್ಯ ರೈ ನಾಯಕಿಯರಾಗಿ ನಟಿಸಿದ್ದಾರೆ.
ಚಿತ್ರಕ್ಕೆ ಚೆನ್ನೈಯ ಎಸ್. ಚಂದ್ರಶೇಖರನ್ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ, ಸ್ಟಂಟ್ ಶಿವು ಸಾಹಸ ನಿರ್ದೇಶನ ಹಾಗೂ ವಿನಾಯಕ ಆಚಾರ್ಯ ನೃತ್ಯ ನಿರ್ದೇಶನವಿದೆ. ‘ವರಾಹ ರೂಪಂ’ ಹಾಡಿನ ಮೂಲಕ ಖ್ಯಾತಿ ಪಡೆದ ಶಶಿರಾಜ್ ಕಾವೂರು ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ಒಂಬತ್ತು ಹಾಡುಗಳಿದ್ದು, ಐದು ಪೂರ್ಣ ಪ್ರಮಾಣದ ಹಾಡುಗಳು ಹಾಗೂ ನಾಲ್ಕು ತುಣುಕು ಹಾಡುಗಳಿವೆ. ಅಭಿ ವಿ., ಸಾಯಿ ವಿಘ್ನೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು ಹಾಗೂ ಮಣಿಕಾಂತ್ ಕದ್ರಿ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಕರಾವಳಿಯ ಹಾಸ್ಯ ಮತ್ತು ಕಥನ ಶೈಲಿಗೆ ಕೇರಳದ ಪ್ರೇಕ್ಷಕರೂ ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ ಎಂಬ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದರೂ, ಇತರ ಚಿತ್ರಗಳೊಂದಿಗೆ ಸ್ಪರ್ಧೆ ಎದುರಾಗದಂತೆ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಗೋಪಿನಾಥ್ ಭಟ್, ಕಾರ್ಯಕಾರಿ ನಿರ್ಮಾಪಕರಾದ ಲಕ್ಷ್ಮಣ ಮಲ್ಲೂರು, ಸಂತೋಷ್ ಶೆಟ್ಟಿ, ನಿರ್ದೇಶಕ ಶಶಿರಾಜ್ ಕಾವೂರು, ನಟ ನವೀನ್ ಡಿ. ಪಡೀಲ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮತ್ತಿತರರು ಇದ್ದರು.






