
ಮಂಗಳೂರು: ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಹಾಗೂ ಪಾದಚಾರಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೊಟ್ಟಾರ ಚೌಕಿಯಿಂದ ಲೇಡಿಹಿಲ್‌ನ ನಾರಾಯಣ ಗುರು ವೃತ್ತದವರೆಗೆ ನೂತನ ಸ್ಮಾರ್ಟ್ ರಸ್ತೆ ನಿರ್ಮಾಣಕ್ಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ಈ ಯೋಜನೆಯ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ಮುಡಾ ಆಯುಕ್ತರು, ವಾಸ್ತುಶಿಲ್ಪಿ ಸುಪ್ರೀತ್ ಆಳ್ವ ಹಾಗೂ ಅಧಿಕಾರಿಗಳೊಂದಿಗೆ ಪ್ರಸ್ತಾವಿತ ರಸ್ತೆ ಮಾರ್ಗದಲ್ಲಿ ನಡಿಗೆಯ ಮೂಲಕ ಸ್ಥಳ ಪರಿಶೀಲನೆ ನಡೆಸಿದರು.
ರಸ್ತೆ ನಿರ್ಮಾಣದ ವೇಳೆ ಎದುರಾಗಬಹುದಾದ ತಾಂತ್ರಿಕ ಹಾಗೂ ಇತರ ಸಮಸ್ಯೆಗಳನ್ನು ಪರಿಶೀಲಿಸಿದ ಅವರು, ಕಾಮಗಾರಿ ಅನುಷ್ಠಾನಕ್ಕೆ ಮುನ್ನವೇ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆಯನ್ನು ಸುಗಮವಾಗಿ ಕಾರ್ಯಗತಗೊಳಿಸಲು ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದರು.
ಸ್ಮಾರ್ಟ್ ರಸ್ತೆ ನಿರ್ಮಾಣದಿಂದ ನಗರದ ಸಂಚಾರ ವ್ಯವಸ್ಥೆ ಮತ್ತಷ್ಟು ಸುಧಾರಿಸುವುದರ ಜತೆಗೆ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಸುಗಮ ಸಂಚಾರದ ಅನುಕೂಲ ದೊರೆಯಲಿದೆ. ನಗರದ ರಸ್ತೆ ಮೂಲಸೌಕರ್ಯಕ್ಕೆ ಈ ಯೋಜನೆ ಮಹತ್ವದ ಕೊಡುಗೆ ನೀಡುವ ನಿರೀಕ್ಷೆಯಿದೆ.






