ಶಾಸಕ ಯಶ್ ಪಾಲ್ ಸುವರ್ಣ ಹೇಳಿಕೆ, ತಕ್ಷಣವೇ ಹಿಂಪಡೆಯಬೇಕು: ಮಮತಾ ಗಟ್ಟಿ ಆಗ್ರಹ

ಪುತ್ತೂರು ಜಿಲ್ಲಾ ಸುದ್ದಿ ಮಂಗಳೂರು ಮಹಾನಗರ ರಾಜಕೀಯ ಶಿಕ್ಷಣ

Spread the love

ಮಂಗಳೂರು: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ನೀಡಿರುವ ಹೇಳಿಕೆ ರಾಜಕೀಯ ಸಂಸ್ಕೃತಿಗೆ ಧಕ್ಕೆ ತರುವಂತಿದ್ದು, ಅದನ್ನು ತಕ್ಷಣವೇ ಹಿಂಪಡೆದು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ವ್ಯಕ್ತಿಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಆರೋಪಗಳನ್ನು ಮಾಡುವುದು ಅತ್ಯಂತ ಖಂಡನೀಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಜನಪ್ರತಿನಿಧಿಗಳು ವೈಯಕ್ತಿಕ ನಿಂದನೆಗಳಲ್ಲಿ ತೊಡಗುವುದಕ್ಕಿಂತ ಜನರ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ನಿಭಾಯಿಸಬೇಕು ಎಂದರು.

ಯಶ್ ಪಾಲ್ ಸುವರ್ಣ ಅವರು “ರಾಹುಲ್ ಗಾಂಧಿ ಅವರ ಕುಟುಂಬವನ್ನು ಬಾಬರಿ ಮಸೀದಿ ಧ್ವಂಸ ಮಾಡಿದಂತೆ ಧ್ವಂಸ ಮಾಡುತ್ತೇವೆ” ಎಂದು ಹೇಳಿರುವುದಾಗಿ ವರದಿಯಾಗಿರುವುದು ಮತ್ತಷ್ಟು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಹೇಳಿಕೆಗಳು ದ್ವೇಷವನ್ನು ಪ್ರಚೋದಿಸುವುದರ ಜೊತೆಗೆ ಪ್ರಜಾಪ್ರಭುತ್ವದ ಸಂಸ್ಕೃತಿಗೆ ವಿರುದ್ಧವಾದ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಟೀಕಿಸಿದರು.

ಯಶ್ ಪಾಲ್ ಸುವರ್ಣ ಅವರು ತಮ್ಮ ಹೇಳಿಕೆಯನ್ನು ತಕ್ಷಣವೇ ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಅಲ್ಲದೆ, ಈ ಹೇಳಿಕೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕಾನೂನುಬದ್ಧವಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಪ್ಪಿ, ಪ್ರಮುಖರಾದ ಶಾಂತಲಾ ಗಟ್ಟಿ, ವೀಣಾ, ಚಂದ್ರಕಲಾ, ವೃಂದಾ ಪೂಜಾರಿ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *