ಕಾರವಾರ: ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡುತ್ತಾ ವೀರ ಮರಣವನ್ನಪ್ಪಿದ ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ್ ಹುತಾತ್ಮ ವಿನೋದ ನಾಯ್ಕ ಅವರ 21ನೇ ಪುಣ್ಯತಿಥಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹುತಾತ್ಮ ವಿನೋದ ನಾಯ್ಕ ಅವರ ಸ್ಮಾರಕದ ಸುತ್ತಲೂ ನೂತನವಾಗಿ ನಿರ್ಮಿಸಲಾದ ಕಾಂಪೌಂಡ್ ಗೋಡೆ ಹಾಗೂ ಕಬ್ಬಿಣದ ಗೇಟನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹುತಾತ್ಮ ವಿನೋದ ನಾಯ್ಕ ಅವರ ಪುಣ್ಯತಿಥಿಯಂದು ಅವರ ಪುಣ್ಯಭೂಮಿಗೆ ಬಂದು ಗೌರವ ಸಲ್ಲಿಸಿರುವುದು ಹೆಮ್ಮೆಯ ಸಂಗತಿ. ಏಕೈಕ ಪುತ್ರನನ್ನು ದೇಶ ಸೇವೆಗೆ ಅರ್ಪಿಸಿದ ಅವರ ತಂದೆ ಮಹಾದೇವ ನಾಯ್ಕ ಅವರಿಗೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ. ದೇಶಕ್ಕಾಗಿ ಅಮೂಲ್ಯ ರತ್ನವನ್ನು ನೀಡಿದ ಕುಟುಂಬದ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದರು.

ವೀರ ಯೋಧನ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ ಅವರು, ಹುತಾತ್ಮ ವಿನೋದ ನಾಯ್ಕ ಅವರ ಶೌರ್ಯ, ಬಲಿದಾನ ಮತ್ತು ದೇಶ ಸೇವೆ ಸದಾ ಸ್ಮರಣೀಯ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದು ನಾಯ್ಕ ಮಾತನಾಡಿ, ದೇಶಕ್ಕಾಗಿ ಶೌರ್ಯದಿಂದ ಹೋರಾಡಿ ಬಲಿದಾನ ಮಾಡಿದ ವೀರ ಯೋಧ ವಿನೋದ ನಾಯ್ಕ ಅವರಿಗೆ ಪುಣ್ಯತಿಥಿಯಂದು ನಮನ ಸಲ್ಲಿಸುತ್ತೇವೆ. ಅವರ ತಂದೆ ಮಹಾದೇವ ನಾಯ್ಕ ಅವರು ಪುತ್ರನ ಸ್ಮರಣೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಹುತಾತ್ಮ ವಿನೋದ ನಾಯ್ಕ ಅವರ ತಂದೆ ಮಹಾದೇವ ನಾಯ್ಕ ಮಾತನಾಡಿ, ಸ್ಮಾರಕದ ಸುತ್ತಲೂ ನೂತನ ಕಾಂಪೌಂಡ್ ಗೋಡೆ ಹಾಗೂ ಕಬ್ಬಿಣದ ಗೇಟು ನಿರ್ಮಿಸಲು ವೈಯಕ್ತಿಕವಾಗಿ ಧನ ಸಹಾಯ ನೀಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ್ ಗುನಗಿ ಮಾತನಾಡಿ, ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ಗೌರವ ನಮನ ಸಲ್ಲಿಸುವ ಮೂಲಕ ವೀರ ಯೋಧನ ಕುಟುಂಬಕ್ಕೆ ಸಮಸ್ತ ದೇಶದ ಜನರ ಪರವಾಗಿ ಗೌರವ ಸಲ್ಲಿಸೋಣ ಎಂದರು.
ವೀರ ಯೋಧ ವಿನೋದ ನಾಯ್ಕ ಅವರ ಪುಣ್ಯತಿಥಿಯ ಅಂಗವಾಗಿ ರೂಪಾಲಿ ನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು, ನಿವೃತ್ತ ಸೈನಿಕರು ಮತ್ತು ನಾಗರಿಕರ ಸಹಯೋಗದಲ್ಲಿ ತೆಂಗಿನ ಸಸಿಗಳು ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು. ಬಳಿಕ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಗೂ ರಾಷ್ಟ್ರಗೀತೆ ಹಾಡಲಾಯಿತು. ನಿವೃತ್ತ ಪೊಲೀಸ್ ಎಎಸ್‌ಐ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಿಶೋರ ಕಡವಾಡಕರ ಅವರು ಪೆರೇಡ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಆನಂದು ಆರ್. ನಾಯ್ಕ, ಮಾಜಿ ಸದಸ್ಯರಾದ ಕಿಶೋರ ಕಡವಾಡಕರ ಹಾಗೂ ದೇವಿದಾಸ ತಳೇಕರ, ನಿವೃತ್ತ ಸೈನಿಕರಾದ ಶೆಶಾಂಕ ಕಡವಾಡಕರ, ಬಾಲಕೃಷ್ಣ ಭೋವಿ, ಅನಿಲ ನಾಯ್ಕ, ಗಣಪತಿ ಗುರವ, ಕೃಷ್ಣಪ್ಪ ಬಾಂದೇಕರ, ಲಿಂಗೇಶ್ವರ ತಳೇಕರ, ಉದಯ ಮಾಂಜ್ರೇಕರ, ಅಶೋಕ ತಾಮಸೆ, ಪ್ರವೀಣ ಮಾಂಜ್ರೇಕರ, ರಾಜಾರಾಮ ನಾಯ್ಕ, ನಂದನ ಮಾಂಜ್ರೇಕರ, ರಾಮನಾಥ ನಾಯ್ಕ, ರೋಹಿದಾಸ ನಾಯ್ಕ, ರೇಖಾ ಆರ್. ನಾಯ್ಕ ಹಾಗೂ ವಿಷ್ಣು ಗಾಯಕ ಇದ್ದರು.
What do you feel about this post?
Like
Love
Happy
Haha
Sad





