ಮಂಗಳೂರು: ನಗರದ ಸಮಸ್ಯೆಗಳನ್ನು ಕಚೇರಿಯಲ್ಲೇ ಕುಳಿತು ಪರಿಶೀಲಿಸುವ ಬದಲು ಜನರ ಬಳಿಗೆ ತೆರಳಿ ಸ್ಥಳದಲ್ಲೇ ಅರಿತುಕೊಳ್ಳುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ‘ವಾಕ್ ವಿತ್ ಕಮಿಷನರ್’ ಪರಿಕಲ್ಪನೆಯಡಿ ಮುಂದಿನ ತಿಂಗಳಿನಿಂದ ವಾರ್ಡ್‌ಗಳಲ್ಲಿ ಸ್ವತಃ ಸುತ್ತಾಡಿ ಸಮಸ್ಯೆಗಳನ್ನು ಪರಿಶೀಲಿಸುವುದಾಗಿ ಪಾಲಿಕೆ ಆಯುಕ್ತ ರಾಹುಲ್ ರತ್ನ ಪಾಂಡೆ ತಿಳಿಸಿದ್ದಾರೆ.

ಜಪ್ಪು ಅಂಬಾನಗರದ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ನಗರದ ರೆಡ್‌ಕ್ರಾಸ್ ಭವನದಲ್ಲಿ ಆಯೋಜಿಸಿದ್ದ ‘ಬೆಳೆಯುತ್ತಿರುವ ನಗರದ ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಯಲ್ಲಿನ ಸವಾಲುಗಳು–ಪರಿಹಾರ ಕಂಡುಕೊಳ್ಳುವಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಪಾತ್ರ’ ಕುರಿತ ‘ಅವೇಕ್ ಕುಡ್ಲ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಾದದಲ್ಲಿ ಸಾರ್ವಜನಿಕರು ನಗರದ ಫುಟ್‌ಪಾತ್ ಸಮಸ್ಯೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ರಸ್ತೆ ವಿಸ್ತರಣೆಯಾದರೂ ಪಾದಚಾರಿಗಳಿಗೆ ನಡೆಯಲು ಸೂಕ್ತ ಜಾಗವಿಲ್ಲ. ಕಟ್ಟಡಗಳ ಮುಂಭಾಗದಲ್ಲಿ ವಾಹನಗಳ ಅಕ್ರಮ ನಿಲುಗಡೆಯಿಂದ ಫುಟ್‌ಪಾತ್ ಬಳಕೆ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಸಚಿವ ಸಂಪುಟ ಸಭೆ ಹಾಗೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಮುಂದಿನ ತಿಂಗಳಿನಿಂದ ಸ್ವತಃ ಫುಟ್‌ಪಾತ್‌ಗಳಿಗೆ ತೆರಳಿ ಪರಿಶೀಲನೆ ನಡೆಸುತ್ತೇನೆ. ನಗರದ ಫುಟ್‌ಪಾತ್‌ಗಳು ಶೇ.100ರಷ್ಟು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಬೇಕು ಎಂದರು.
ನಗರದಲ್ಲಿ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಶೇ.65ರಷ್ಟು ಮಾತ್ರ ಕಸ ವಿಲೇವಾರಿಯಾಗುತ್ತಿದ್ದು, ಪ್ರತಿದಿನ ಸುಮಾರು 300 ಟನ್ ಘನ ತ್ಯಾಜ್ಯ ಸಂಗ್ರಹವಾಗುತ್ತಿದೆ. 10 ಟನ್ ಸಾಮರ್ಥ್ಯದ ಸ್ಯಾನಿಟರಿ ತ್ಯಾಜ್ಯ ವಿಲೇವಾರಿ ಘಟಕದ ಅಗತ್ಯವಿದೆ ಎಂದು ಆಯುಕ್ತರು ತಿಳಿಸಿದರು.
2021ರ ಅಂದಾಜಿನಂತೆ ಪಚ್ಚನಾಡಿಯಲ್ಲಿ ಸುಮಾರು 9 ಲಕ್ಷ ಟನ್ ತ್ಯಾಜ್ಯವಿತ್ತು. ಇದೀಗ ಅದು ಸುಮಾರು 13 ಲಕ್ಷ ಟನ್‌ಗೆ ತಲುಪಿರುವ ಸಾಧ್ಯತೆಯಿದೆ. ಇದನ್ನು ಹಂತ ಹಂತವಾಗಿ ವಿಲೇವಾರಿ ಮಾಡಲಾಗುವುದು ಎಂದರು.
ನಗರದಲ್ಲಿ ಅಲ್ಲಲ್ಲಿ ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸಲಾಗುತ್ತಿದ್ದರೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಹೀಗಾಗಿ ಪ್ರತಿ ವಾರ್ಡ್‌ನಲ್ಲಿಯೂ ತ್ಯಾಜ್ಯ ಹಾಕಲು ಸೂಕ್ತ ಡಬ್ಬಗಳನ್ನು ಇರಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಅಂಗಡಿಕಾರರು ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದಿದ್ದರೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುವುದು. ಮತ್ತೆ ಅದೇ ತಪ್ಪು ಮುಂದುವರಿದರೆ ಪರವಾನಿಗೆ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ರಸ್ತೆ ವಿಸ್ತರಣೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಈ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದರು.
ನಗರದ ಸಂಚಾರ ದಟ್ಟಣೆ, ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಸಂಬಂಧಿತ ಕಾನೂನುಗಳ ಕುರಿತು ಡಿಸಿಪಿ (ಅಪರಾಧ ಮತ್ತು ಸಂಚಾರ) ಕೆ. ರವಿಶಂಕರ್ ಮಾಹಿತಿ ನೀಡಿದರು.
ಸಂವಾದದಲ್ಲಿ ಹನುಮಂತ ಕಾಮತ್, ಲತೀಫ್, ವಿಶ್ವನಾಥ ಕೋಟೆಕಾರ್, ಬೆನಡಿಕ್ಟ್ ಫೆರ್ನಾಂಡಿಸ್, ಸುನಂದಾ ಬಿಜೈ, ಜಿ.ಕೆ. ಭಟ್, ಕೆ.ಜೆ. ಪಿಂಟೋ, ರಿಯಾ ಪಿಂಟೋ, ದೀಪಕ್ ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಸೀತಾರಾಮ್, ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟೆಕಾರ್ ಉಪಸ್ಥಿತರಿದ್ದರು. ಅಭಿಷೇಕ್ ಶೆಟ್ಟಿ ಸಂವಾದ ನಡೆಸಿಕೊಟ್ಟರು.
What do you feel about this post?
Like
Love
Happy
Haha
Sad





