ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ದೊರೆತಿರುವುದು ತುಳುವರ ಹಲವು ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತುಳುಪರ ಹೋರಾಟಗಾರರೊಂದಿಗೆ ಈ ಬೇಡಿಕೆಗಾಗಿ ಹಲವು ರೀತಿಯಲ್ಲಿ ಕೈಜೋಡಿಸಿದ್ದಾಗಿ ಅವರು ತಿಳಿಸಿದರು. ವಿಧಾನಸಭೆ ಅಧಿವೇಶನಗಳಲ್ಲಿಯೂ ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಕುರಿತು ಪ್ರಸ್ತಾಪಿಸಿದ್ದಾಗಿ ಹೇಳಿದರು.
ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ವಿ. ಸುನಿಲ್ ಕುಮಾರ್ ಅವರು ತುಳು ಭಾಷೆಯ ಈ ಬೇಡಿಕೆಗೆ ವಿಶೇಷ ಮನ್ನಣೆ ನೀಡಿದ್ದರು. ಈ ನಡುವೆ ಡಾ. ಮೋಹನ್ ಆಳ್ವ ಅವರು ಸಲ್ಲಿಸಿದ ಸಮಗ್ರ ವರದಿ ಕೂಡ ತುಳು ಭಾಷೆಯ ಅಧಿಕೃತ ಮಾನ್ಯತೆಯ ಹೋರಾಟಕ್ಕೆ ಮತ್ತಷ್ಟು ಬಲ ನೀಡಿತ್ತು ಎಂದು ವೇದವ್ಯಾಸ ಕಾಮತ್ ಹೇಳಿದರು.
ಇದೀಗ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ದೊರೆತಿರುವುದರಿಂದ ದಶಕಗಳ ಕಾಲದ ಹೋರಾಟ ಸಾರ್ಥಕಗೊಂಡಿದೆ. ಈ ಮಹತ್ವದ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದರು.
ಮಂಗಳೂರು ಜಿಲ್ಲೆ ಮರುನಾಮಕರಣದ ನಿರೀಕ್ಷೆ
ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಬೇಕೆಂಬುದು ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಈ ಸಂಬಂಧವೂ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಬೇಡಿಕೆ ಈಡೇರುವ ನಿರೀಕ್ಷೆಯಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.
What do you feel about this post?
Like
Love
Happy
Haha
Sad






