ಮಂಗಳೂರು: ನಗರದ ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲೇ ಅರಿತು ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಗುರುವಾರ ಬೆಳಿಗ್ಗೆ ಅಧಿಕಾರಿಗಳ ಜತೆಗೆ ಮಹಾನಗರ ಪಾಲಿಕೆ ಕಮಿಷನರ್ ರಾಹುಲ್ ರತ್ನಂ ಪಾಂಡೆ ನಗರ ಪ್ರದಕ್ಷಿಣೆ ಮಾಡಿದರು.
ಫುಟ್‌ಪಾತ್ ಅತಿಕ್ರಮಣ, ಪಾರ್ಕಿಂಗ್ ಸಮಸ್ಯೆ, ತ್ಯಾಜ್ಯ ಎಸೆಯುವ ಸ್ಥಳಗಳು ಹಾಗೂ ರಸ್ತೆ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್‌ಸ್ಟ್ರೀಟ್‌ನ ವೆಂಕಟರಮಣ ದೇವಸ್ಥಾನದ ಬಳಿಯಿಂದ ಬೆಳಿಗ್ಗೆ 7ಕ್ಕೆ ಆರಂಭವಾದ ಕಾಲ್ನಡಿಗೆ, ನಗರ ಭವಂತಿ ಸ್ಟ್ರೀಟ್, ಸೆಂಟ್ರಲ್ ಮಾರುಕಟ್ಟೆ ಹಿಂಬದಿ ರಸ್ತೆ, ಜಿ.ಎಚ್.ಎಸ್. ರಸ್ತೆ, ಮಾರ್ಕೆಟ್ ಅಡ್ಡ ರಸ್ತೆ, ಹಂಪನಕಟ್ಟೆ ಸಿಗ್ನಲ್, ಕೆ.ಬಿ. ಕಟ್ಟೆ, ಲೇಡಿಗೋಷನ್ ಆಸ್ಪತ್ರೆ ಮೂಲಕ ಸೆಂಟ್ರಲ್ ಮಾರುಕಟ್ಟೆ ಕಟ್ಟಡದವರೆಗೆ ನಡೆಯಿತು.
ಫುಟ್‌ಪಾತ್ ಅತಿಕ್ರಮಣ ಕಂಡುಬಂದ ಸ್ಥಳಗಳಲ್ಲಿ ಸಂಬಂಧಪಟ್ಟವರಿಗೆ ನೋಟಿಸ್ ನೀಡುವಂತೆ ಆಯುಕ್ತರು ಸೂಚಿಸಿದರು. ಹಣ್ಣು, ಹೂವು ಸೇರಿದಂತೆ ಯಾವುದೇ ವ್ಯಾಪಾರವನ್ನು ಫುಟ್‌ಪಾತ್‌ನಲ್ಲಿ ನಡೆಸಲು ಅವಕಾಶವಿಲ್ಲ. ಅತಿಕ್ರಮಣ ಮುಂದುವರಿದರೆ ತೆರವುಗೊಳಿಸಲಾಗುವುದು ಎಂದರು.
ಒಂದು ತಿಂಗಳಲ್ಲಿ ಸೆಂಟ್ರಲ್ ಮಾರುಕಟ್ಟೆ
ಸೆಂಟ್ರಲ್ ಮಾರುಕಟ್ಟೆ ಕಾಮಗಾರಿ ಒಂದು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಸುತ್ತಮುತ್ತ ನಡೆಯುತ್ತಿರುವ ಮೀನು, ಹೂವು ಹಾಗೂ ಹಣ್ಣು ವ್ಯಾಪಾರವನ್ನು ಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಬಳಿಕ ಮಾರುಕಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಹಾಗೂ ವ್ಯಾಪಾರಕ್ಕೆ ಅವಕಾಶ ಇರುವುದಿಲ್ಲ ಎಂದರು.
ಮಾರುಕಟ್ಟೆಯ ಮೂರು ಅಂತಸ್ತುಗಳಿಗೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬಹುಮಹಡಿ ವಾಹನ ನಿಲುಗಡೆ ಯೋಜನೆ 2021–22ರಲ್ಲಿ ಆರಂಭವಾಗಿದ್ದರೂ ಕಾನೂನು ಹಾಗೂ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಪ್ರಸ್ತುತ ಕಾಮಗಾರಿಗೆ ಇನ್ನೂ ಸುಮಾರು ಒಂದೂವರೆ ವರ್ಷ ಬೇಕಾಗಬಹುದು ಎಂದು ಅವರು ತಿಳಿಸಿದರು.
ತ್ಯಾಜ್ಯ ಎಸೆದರೆ ದಂಡ, ಎಫ್‌ಐಆರ್
ನಗರದಲ್ಲಿ ಪ್ರತಿನಿತ್ಯ ರಸ್ತೆ ಸ್ವಚ್ಛಗೊಳಿಸಿ ಕಸ ಸಂಗ್ರಹಿಸಲಾಗುತ್ತಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಕಂಡುಬಂದಿದೆ. ಇಂತಹ ಸ್ಥಳಗಳನ್ನು ಕಮಾಂಡ್ ಸೆಂಟರ್ ಮೂಲಕ ಗುರುತಿಸಿ ಕ್ರಮ ಕೈಗೊಳ್ಳಲಾಗುವುದು. ತ್ಯಾಜ್ಯ ಎಸೆಯುವ ವಾಹನಗಳ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸಲಾಗುವುದು.
ದಂಡ ಪಾವತಿಸಿದ ಬಳಿಕವೂ ಮತ್ತೆ ತ್ಯಾಜ್ಯ ಎಸೆಯುವುದು ಮುಂದುವರಿದರೆ, ಅನ್ವಯಿಸುವ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
ಹಂಪನಕಟ್ಟೆಯ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಸೇವಿಸಿ ಆಹಾರದ ಗುಣಮಟ್ಟ ಪರಿಶೀಲಿಸಿದ ಅವರು, ಆಹಾರದ ಗುಣಮಟ್ಟ ಉತ್ತಮವಾಗಿದೆ ಎಂದರು. ಪಾಲಿಕೆಯ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.
ಪಾಲಿಕೆ ಅಧಿಕಾರಿಗಳು, ಇನ್ ಸ್ಪೆಕ್ಟರ್ ಅಮಾನುಲ್ಲಾ ಖಾನ್ ಸೇರಿದಂತೆ ಹಲವರು ಇದ್ದರು.
What do you feel about this post?
Like
Love
Happy
Haha
Sad






