ಸಹ್ಯಾದ್ರಿಯಲ್ಲಿ ನ.12 ರಿಂದ ‘ಸೈನೆರ್ಜಿಯಾ, ಏರ್ ಶೋ, ಡ್ರೋನ್ ರೇಸಿಂಗ್ ಸದ್ದು: ಪ್ರಾಚಾರ್ಯ ಇಂಜಗನೇರಿ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ತಂತ್ರಜ್ಞಾನ, ನಾವೀನ್ಯತೆ ಮತ್ತು ಯುವ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿರುವ ರಾಷ್ಟ್ರೀಯ ತಾಂತ್ರಿಕ ಉತ್ಸವ ‘ಸೈನೆರ್ಜಿಯಾ-2026’ಕ್ಕೆ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು ಸಜ್ಜಾಗಿದೆ. ಕಾಲೇಜು ಹಾಗೂ ಶೈನ್ ಫೌಂಡೇಶನ್ ಸಹಯೋಗದಲ್ಲಿ ನವೆಂಬರ್ 12ರಿಂದ 14ರವರೆಗೆ ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು, 425ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಇಂಜಗನೇರಿ ಅವರು ತಿಳಿಸಿದರು.

ನ.12 ರಂದು ಉತ್ಸವ ಉದ್ಘಾಟನೆಗೊಳ್ಳಲಿದ್ದು, ಜಿಟಿಟಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿದ್ಧಲಿಂಗಪ್ಪ ಬಿ. ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನ.14 ರಂದು ಸಮಾರೋಪ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ 13ನೇ ಆವೃತ್ತಿಯ ‘ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್’ ವಿದ್ಯಾರ್ಥಿಗಳ ಹೊಸ ಆಲೋಚನೆಗಳು ಮತ್ತು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯೋಜನೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಟ್ಟು ₹2 ಲಕ್ಷ ಮೌಲ್ಯದ ಆರಂಭಿಕ ಅನುದಾನ ನೀಡಲಾಗುತ್ತದೆ. ಅಲ್ಲದೆ, ಸಹ್ಯಾದ್ರಿ ಆವರಣದಲ್ಲಿ ತಜ್ಞರ ಮಾರ್ಗದರ್ಶನ ಹಾಗೂ ನಾವೀನ್ಯತಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶವಿದೆ.

ಉತ್ಸವದ ಅಂಗವಾಗಿ ‘ಡೈವೋಸ್ಟ್’ ಕಾರ್ಯಕ್ರಮವೂ ನಡೆಯಲಿದ್ದು, 36 ಗಂಟೆಗಳ ಹ್ಯಾಕಥಾನ್, ತಂತ್ರಾಂಶ ಅಭಿವೃದ್ಧಿಪಡಿಸುವವರ ವಿಶೇಷ ಉಪನ್ಯಾಸಗಳು, ಕೈಗಾರಿಕಾ ತಜ್ಞರಿಂದ ಕಾರ್ಯಾಗಾರ ಹಾಗೂ ವಿವಿಧ ತಾಂತ್ರಿಕ ಸ್ಪರ್ಧೆಗಳು ಆಯೋಜನೆಯಾಗಿವೆ.

ನ.13ರಂದು ಬೆಳಿಗ್ಗೆ 9 ಗಂಟೆಗೆ ರಾಷ್ಟ್ರೀಯ ಏರೋಟೆಕ್ ಉತ್ಸವದ ಅಂಗವಾಗಿ ಏರ್ ಶೋ ನಡೆಯಲಿದೆ. ಆರೋಫೀಲಿಯಾ ಟೀಮ್ ಚಾಲೆಂಜರ್ಸ್ ಆಯೋಜನೆಯ ಈ ಕಾರ್ಯಕ್ರಮಕ್ಕೆ ನೈನೆಟ್ರಾನ್ ಟೆಕ್ ಪ್ರಾಯೋಜಕತ್ವ ನೀಡಿದೆ. ಏರೋ ಮಾಡೆಲಿಂಗ್ ಪ್ರದರ್ಶನ, ಡ್ರೋನ್ ರೇಸಿಂಗ್, ದೂರನಿಯಂತ್ರಿತ ವಿಮಾನಗಳ ಹಾರಾಟ, ಗೇಮಿಂಗ್ ಸ್ಪರ್ಧೆಗಳು ಹಾಗೂ ಕಾರ್ಯಾಗಾರಗಳು ನಡೆಯಲಿವೆ.

ಸಹ್ಯಾದ್ರಿ ರೊಬೋಟಿಕ್ಸ್ ಕ್ಲಬ್ ವತಿಯಿಂದ ರೋಬೋ ಸಾಕರ್, ರೊಬೋಟಿಕ್ಸ್ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳಿಗೆ ಸಂಬಂಧಿಸಿದ ಸ್ಪರ್ಧೆಗಳೂ ಇರಲಿವೆ. ಯುವ ಉದ್ಯಮಶೀಲತೆಗೆ ಪ್ರೇರಣೆ ನೀಡುವ ಮೂಲಕ ಪ್ರಾದೇಶಿಕ ನವೋದ್ಯಮಗಳ ಬೆಳವಣಿಗೆಗೂ ಸೈನೆರ್ಜಿಯಾ ವೇದಿಕೆಯಾಗುತ್ತಿದೆ ಎಂದು ಅವರು ಹೇಳಿದರು.

ಆಡಳಿತಾಧಿಕಾರಿ ಕೃಷ್ಣ ಹೆಗ್ಡೆ, ಡೀನ್ ಡಾ. ಶಮಂತ್ ರೈ, ಪ್ರಾಧ್ಯಾಪಕ ಸಂಯೋಜಕ ಡಾ. ಪ್ರಶಾಂತ್ ರಾವ್, ಕಾರ್ಯಕ್ರಮ ಸಂಯೋಜಕ ಭವಿಷ್ ಶೆಟ್ಟಿ ಮತ್ತು ಖುಷಿ ಶೆಟ್ಟಿ, ಮಾಧ್ಯಮ ಸಂಚಾಲಕ ವಸಂತ ಖೇದಿಗೆ ಇದ್ದರು.

Leave a Reply

Your email address will not be published. Required fields are marked *